ನೊಬೆಲ್ ಪ್ರಶಸ್ತಿ 2024 | ಅಮೆರಿಕದ ಮೂವರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

PC : businesstoday.in
ಓಸ್ಲೊ: ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ಥಾಪಿಸಲಾಗಿರುವ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಸಂಸ್ಥೆಗಳನ್ನು ಹೇಗೆ ಸ್ಥಾಪಿಸಲಾಗುತ್ತದೆ ಹಾಗೂ ಅವು ಸಮೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಕುರಿತು ಅಧ್ಯಯನ ನಡೆಸಿರುವ ಅಮೆರಿಕದ ಡ್ಯಾರನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಹಾಗೂ ಜೇಮ್ಸ್ ಎ ರಾಬಿನ್ಸನ್ ಅವರಿಗೆ ಪ್ರದಾನ ಮಾಡಲು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ನಿರ್ಧರಿಸಿದೆ.
“ರಾಜಕೀಯ ಸಂಸ್ಥೆಗಳು ಯಾವ ಪರಿಸ್ಥಿತಿಯಲ್ಲಿ ರಚನೆಗೊಂಡವು ಹಾಗೂ ಬದಲಾದವು ಎಂಬ ಕುರಿತು ಈ ಅರ್ಥಶಾಸ್ತ್ರಜ್ಞರು ವಿವರಿಸಿರುವ ಮಾದರಿಯಲ್ಲಿ ಮೂರು ಘಟಕಗಳಿವೆ. ಮೊದಲನೆಯದಾಗಿ ಸಂಪನ್ಮೂಲಗಳನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬ ಬಿಕ್ಕಟ್ಟು ಹಾಗೂ ಸಮಾಜದಲ್ಲಿ ಯಾರು ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ (ಶ್ರೀಮಂತರು ಅಥವಾ ಜನಸಾಮಾನ್ಯರು) ಎಂಬುದಾಗಿದೆ” ಎಂದು ನೊಬೆಲ್ ಪ್ರಶಸ್ತಿ ಸಮಿತಿಯು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ.
ಎರಡನೆಯದು, ಜನಸಾಮಾನ್ಯರು ಕೆಲವೊಮ್ಮೆ ಆಡಳಿತಾರೂಢ ಶ್ರೀಮಂತರ ವಿರುದ್ಧ ಅಧಿಕಾರವನ್ನು ಕ್ರೋಡೀಕರಿಸಿ ಮತ್ತು ಬೆದರಿಸುವ ಮೂಲಕ ತಮ್ಮ ಅಧಿಕಾರವನ್ನು ಚಲಾಯಿಸುವ ಅವಕಾಶ ಪಡೆಯುತ್ತಾರೆ ಎಂಬುದು. ಹೀಗಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರಕ್ಕಿಂತ ಸಮಾಜದಲ್ಲಿನ ಅಧಿಕಾರವು ಹೆಚ್ಚಿನದಾಗಿರುತ್ತದೆ. ಮೂರನೆಯದು, ಬದ್ಧತೆಯ ಸಮಸ್ಯೆ. ಅರ್ಥಾತ್, ಶ್ರೀಮಂತರಿಗಿರುವ ಒಂದೇ ಪರ್ಯಾಯವೆಂದರೆ, ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಜನಸಮೂಹಕ್ಕೆ ಬಿಟ್ಟುಕೊಡುವುದು” ಎಂದೂ ಪೋಸ್ಟ್ ನಲ್ಲಿ ಹೇಳಲಾಗಿದೆ.
ನೊಬೆಲ್ ಪ್ರಶಸ್ತಿಯನ್ನು ಅಧಿಕೃತವಾಗಿ ಬ್ಯಾಂಕ್ ಆಫ್ ಸ್ವೀಡನ್ ಪ್ರೈಝ್ ಇನ್ ಎಕನಾಮಿಕ್ ಸೈನ್ಸಸ್ ಎಂದು ಕರೆಯಲಾಗುತ್ತದೆ. ಈ ಪ್ರಶಸ್ತಿಯನ್ನು ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ಥಾಪಿಸಲಾಗಿದೆ.







