ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನೊಬೆಲ್ ಪ್ರಶಸ್ತಿ ವಿಜೇತೆ ನರ್ಗಿಸ್ ಮುಹಮ್ಮದಿಗೆ ನಿರಾಕರಣೆ : ಆರೋಪ
ಇರಾನ್ ಜೈಲಿನಲ್ಲಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ

ನರ್ಗಿಸ್ ಮುಹಮ್ಮದಿ | Photo : NDTV
ಪ್ಯಾರಿಸ್: ಈ ವಾರದ ಆರಂಭದಲ್ಲಿ ನಿಧನಗೊಂಡ ತಮ್ಮ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ನರ್ಗಿಸ್ ಮುಹಮ್ಮದಿಗೆ ಇರಾನ್ ಪ್ರಾಧಿಕಾರಗಳು ಅವಕಾಶ ನಿರಾಕರಿಸಿವೆ ಎಂದು ಗುರುವಾರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ ಎಂದು ndtv ವರದಿ ಮಾಡಿದೆ.
ಕಳೆದ ಎರಡು ವರ್ಷಗಳಿಂದ ತಮ್ಮ ಪುತ್ರಿಯನ್ನು ನೋಡಿರದಿದ್ದ ಕರೀಮ್ ಮುಹಮ್ಮದಿ ಮಂಗಳವಾರ ನಿಧನರಾಗಿದ್ದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಗುರುವಾರ ಬೆಳಗ್ಗೆ ವಾಯುವ್ಯ ಟೆಹ್ರಾನ್ ನ ಝಂಜನ್ ನಗರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ನರ್ಗಿಸ್ ಮುಹಮ್ಮದಿ ಕುಟುಂಬದ ಸದಸ್ಯರು, “ಹೃದಯ ಒಡೆಯುವಂತೆ ನರ್ಗಿಸ್ ಮುಹಮ್ಮದಿಗೆ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅವರಿಗೆ ವಿದಾಯ ಹೇಳಲು ಅವಕಾಶ ನಿರಾಕರಿಸಲಾಯಿತು” ಎಂದು ಹೇಳಿದ್ದಾರೆ.
ನರ್ಗಿಸ್ ಮುಹಮ್ಮದಿಗೆ ನಿಸ್ಸಂದಿಗ್ಧವಾಗಿ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಹಕ್ಕಿದೆ ಎಂದು ಇದಕ್ಕೂ ಮುನ್ನ ಅವರ ಕುಟುಂಬದ ಸದಸ್ಯರು ಪ್ರತಿಪಾದಿಸಿದ್ದರು.
ಇರಾನ್ ನಲ್ಲಿ ಮಾನವ ಹಕ್ಕುಗಳಿಗಾಗಿ 51 ವರ್ಷದ ಮುಹಮ್ಮದಿ ನಡೆಸುತ್ತಿರುವ ಹೋರಾಟವನ್ನು ಪರಿಗಣಿಸಿ ಕಳೆದ ವರ್ಷ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.







