ನೋಯ್ಡದ ಅಕ್ರಮ ವೃದ್ಧಾಶ್ರಮದಿಂದ 42 ಹಿರಿಯರ ರಕ್ಷಣೆ
ಮಹಿಳೆಯನ್ನು ಕಟ್ಟಿ ಹಾಕಲಾಗಿತ್ತು; ಹಿರಿಯರನ್ನು ಬಟ್ಟೆಯಿಲ್ಲದೆ ಕೂಡಿ ಹಾಕಲಾಗಿತ್ತು!

PC : PTI
ಹೊಸದಿಲ್ಲಿ: ನೋಯ್ಡದ ಅಕ್ರಮ ವೃದ್ಧಾಶ್ರಮವೊಂದರಿಂದ ಕನಿಷ್ಠ 42 ಹಿರಿಯ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಆ ‘’ವೃದ್ಧಾಶ್ರಮ’’ದಲ್ಲಿ ಕೆಲವು ಮಹಿಳೆಯರನ್ನು ಕಟ್ಟಿ ಹಾಕಲಾಗಿತ್ತು ಮತ್ತು ಅಲ್ಲಿನ ಹೆಚ್ಚಿನ ನಿವಾಸಿಗಳನ್ನು ಕೋಣೆಗಳಲ್ಲಿ ಬೆತ್ತಲೆಯಾಗಿ ಕೂಡಿ ಹಾಕಲಾಗಿತ್ತು ಎಂದು ಅವರು ಹೇಳಿದ್ದಾರೆ.
ನಿರ್ದಿಷ್ಟ ಸುಳಿವಿನ ಮೇರೆಗೆ ಪೊಲೀಸರು ಗುರುವಾರ ಉತ್ತರಪ್ರದೇಶ ರಾಜ್ಯ ಮಹಿಳಾ ಆಯೋಗ ಮತ್ತು ರಾಜ್ಯ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ‘‘ವೃದ್ಧಾಶ್ರಮ’’ದ ಮೇಲೆ ದಾಳಿ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಆನಂದ್ ನಿಕೇತನ್ ವೃದ್ಧ ಸೇವಾ ಆಶ್ರಮ’ ಎಂಬ ಹೆಸರಿನ ಕಟ್ಟಡವು ಅವ್ಯವಸ್ಥೆಗಳ ಆಗರವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವೃದ್ಧಾಶ್ರಮವು ಅಕ್ರಮವಾಗಿದ್ದು, ಮಹಿಳೆಯೊಬ್ಬರನ್ನು ಕಟ್ಟಿ ಹಾಕಿರುವುದನ್ನು ತೋರಿಸುವ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು ಎಂದು ಮಹಿಳಾ ಆಯೋಗದ ಸದಸ್ಯೆ ಮೀನಾಕ್ಷಿ ಭರಾಲ್ ತಿಳಿಸಿದರು.
‘‘ದಾಳಿಯ ವೇಳೆ, ಹಿರಿಯ ಮಹಿಳೆಯೊಬ್ಬರನ್ನು ಕಟ್ಟಿ ಹಾಕಿರುವುದು ಮತ್ತು ಇತರ ಹಿರಿಯ ವ್ಯಕ್ತಿಗಳನ್ನು ಕಟ್ಟಡದ ಕೆಳಗಿನ ಭಾಗದ ಕೋಣೆಗಳಲ್ಲಿ ಕೂಡಿಹಾಕಿರುವುದು ಪತ್ತೆಯಾಯಿತು. ಕೆಲವು ಪುರುಷರ ಮೈಯಲ್ಲಿ ಬಟ್ಟೆಯೇ ಇರಲಿಲ್ಲ. ಕೆಲವು ಹಿರಿಯ ಮಹಿಳೆಯರ ಮೈಮೇಲೆ ಕನಿಷ್ಠ ಬಟ್ಟೆಗಳಿದ್ದವು’’ ಎಂದು ಅವರು ಹೇಳಿದರು.
ಈ ಸಂಸ್ಥೆಯು 1994ರಿಂದ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘‘ಈ ವೃದ್ಧಾಶ್ರಮವು ಅಕ್ರಮವಾಗಿತ್ತು. ಅಲ್ಲಿ 42 ಹಿರಿಯರು ವಾಸಿಸುತ್ತಿದ್ದರು. ಅವರ ಪೈಕಿ ಮೂವರನ್ನು ಸಮಾಜ ಕಲ್ಯಾಣ ಇಲಾಖೆ ನಡೆಸುವ ವೃದ್ಧಾಶ್ರಮವೊಂದಕ್ಕೆ ಶುಕ್ರವಾರ ಸೇರಿಸಲಾಗುವುದು. ಉಳಿದವರನ್ನು ಮುಂದಿನ ಐದು ದಿನಗಳಲ್ಲಿ ಇತರ ಸರಕಾರಿ ಅನುಮೋದಿತ ವೃದ್ಧಾಶ್ರಮಗಳಿಗೆ ಸೇರಿಸಲಾಗುವುದು’’ ಎಂದರು.
ಆಶ್ರಮದ ಆಡಳಿತವು ಹಿರಿಯ ವ್ಯಕ್ತಿಗಳ ಆರೈಕೆಗೆ ಅವರ ಕುಟುಂಬಗಳಿಂದ ತಲಾ 2.5 ಲಕ್ಷ ರೂಪಾಯಿ ಅನುದಾನವನ್ನು ಪಡೆದುಕೊಳ್ಳುತ್ತಿತ್ತು. ಜೊತೆಗೆ, ಅದು ಭದ್ರತಾ ಠೇವಣಿಯಾಗಿ 20,000 ರೂ. ಹಾಗೂ ವಾಸ್ತವ್ಯ ಮತ್ತು ಆಹಾರಕ್ಕಾಗಿ 10,000 ದಿಂದ 20,000 ರೂ. ಪಡೆಯುತ್ತಿತ್ತು ಎನ್ನಲಾಗಿದೆ. ಆಶ್ರಮದಲ್ಲಿದ್ದ ಹೆಚ್ಚಿನ ಹಿರಿಯರು ನೋಯ್ಡದ ಶ್ರೀಮಂತ ಕುಟುಂಬಗಳ ಹೆತ್ತವರಾಗಿದ್ದಾರೆ.
ಇಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದರೂ, ಆಶ್ರಮವು ಅಲ್ಲಿನ ನಿವಾಸಿಗಳನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ಇಟ್ಟಿಲ್ಲ. ಅಲ್ಲಿನ ನಿವಾಸಿಗಳು ತಮ್ಮ ದೈನಂದಿನ ಕೆಲಸಗಳನ್ನು ಸ್ವತಃ ಅವರೇ ಮಾಡಿಕೊಳ್ಳುತ್ತಿದ್ದರು. ಅಲ್ಲಿನ ಹೆಚ್ಚಿನ ಹಿರಿಯರ ಬಟ್ಟೆಗಳಲ್ಲಿ ಮೂತ್ರ ಮತ್ತು ಮಲ ಅಂಟಿಕೊಂಡಿತ್ತು ಎನ್ನಲಾಗಿದೆ







