ನೊಯ್ಡಾ: ವಿದ್ಯಾರ್ಥಿ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಸ್ಕೂಟರ್ ಗೆ ಢಿಕ್ಕಿ, ಬಾಲಕಿ ಬಲಿ

PC : PTI
ನೊಯ್ಡಾ,ಜು.27: ವಿದ್ಯಾರ್ಥಿಯೋರ್ವ ತನ್ನ ಬಿಎಂಡಬ್ಲ್ಯು ಕಾರನ್ನು ಅಜಾಗ್ರತೆಯಿಂದ ಚಲಾಯಿಸಿ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ತನ್ನ ತಂದೆಯೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ಐದರ ಹರೆಯದ ಅಸ್ವಸ್ಥ ಬಾಲಕಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ಇಲ್ಲಿ ಸಂಭವಿಸಿದೆ. ಆರೋಪಿ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನನ್ನು ಪೋಲಿಸರು ಬಂಧಿಸಿದ್ದಾರೆ.
ನೋಯ್ಡಾದ ಸದರ್ಪುರ ಖಜೂರ್ ಕಾಲನಿಯ ನಿವಾಸಿ ಅಯಾತ್(5) ಮೃತ ಬಾಲಕಿಯಾಗಿದ್ದಾಳೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಯಾತ್ ಶನಿವಾರ ರಾತ್ರಿ ಹಲವಾರು ಸಲ ವಾಂತಿ ಮಾಡಿಕೊಂಡಿದ್ದಳು. ಆಕೆಯ ತಂದೆ ಗುಲ್ ಮುಹಮ್ಮದ್ ಅವರು ತನ್ನ ಭಾವ ರಾಜಾ ಜೊತೆ ಮಗಳನ್ನು ಸ್ಕೂಟರ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದರು. ಮಾರ್ಗ ಮಧ್ಯೆ ಯಶ್ ಶರ್ಮಾ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದು,ಅದರಲ್ಲಿದ್ದ ಮೂವರೂ ಗಂಭೀರವಾಗಿ ಗಾಯಗೊಂಡಿದ್ದರು. ಅಯಾತ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರೆ ಗುಲ್ ಮುಹಮ್ಮದ್ ಮತ್ತು ರಾಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಶ್ ಶರ್ಮಾ ಮತ್ತು ಆತನೊಂದಿಗಿದ್ದ ಅಭಿಷೇಕ ರಾವತ್ ಅವರನ್ನು ಬಂಧಿಸಿರುವ ನೋಯ್ಡಾ ಪೋಲಿಸರು,ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದ್ದಾರೆ.
ರಾವತ್ ನೋಯ್ಡಾದಲ್ಲಿ ರೆಸ್ಟೋರಂಟ್ ಹೊಂದಿದ್ದಾನೆ. ಅಪಘಾತದಿಂದ ಎರಡೂ ವಾಹನಗಳಿಗೆ ತೀವ್ರ ಹಾನಿಯಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸರು ತಿಳಿಸಿದರು.





