ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಗುಂಡಿಕ್ಕಿ ಕೊಂದ ಸಂಗಾತಿ

ಸಾಂದರ್ಭಿಕ ಚಿತ್ರ | Photo Credit : freepik
ನೊಯ್ಡಾ(ಉ.ಪ್ರ): 25ರ ಹರೆಯದ ಯುವತಿಯೋರ್ವಳನ್ನು ಆಕೆಯ ಸಂಗಾತಿಯೇ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಇಲ್ಲಿ ನಡೆದಿದೆ. ಯುವತಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆತ ಆಕೆಯನ್ನು ಕೊಂದಿದ್ದಾನೆ ಎಂದು ಪೋಲಿಸರು ಶಂಕಿಸಿದ್ದಾರೆ.
ಆರೋಪಿಯು ತಲೆ ಮರೆಸಿಕೊಂಡಿದ್ದು,ಆತನ ಬಂಧನಕ್ಕಾಗಿ ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.
ಶುಕ್ರವಾರ ಸಂಜೆ ಫೇಜ್ 2 ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೃಷ್ಣ (26) ಎಂಬಾತ ತನ್ನ ಗೆಳತಿ ಸೋನುವಿನ ಪಿಜಿಯಲ್ಲಿ ಆಕೆಯ ಮೇಲೆ ಗುಂಡು ಹಾರಿಸಿದ್ದ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೋಲಿಸರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ ಎಂದು ಡಿಸಿಪಿ ಶಕ್ತಿಮೋಹನ ಅವಸ್ಥಿ ತಿಳಿಸಿದರು.
ಇಬ್ಬರ ನಡುವೆ ವಿವಾದದಿಂದಾಗಿ ಕೃಷ್ಣ ಯುವತಿಯ ಕೋಣೆಗೆ ನುಗ್ಗಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ ಎನ್ನುವುದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದರು.
ಅಮ್ರೋಹಾ ಮೂಲದ ಸೋನು ಮತ್ತು ಬಿಹಾರ ಮೂಲದ ಕೃಷ್ಣ ಈ ಹಿಂದೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಆಗಿನಿಂದ ಸಂಬಂಧವನ್ನು ಹೊಂದಿದ್ದರು.
ಸೋನು ಪ್ರಸ್ತುತ ಮನೆಗೆಲಸದಾಳಾಗಿದ್ದಳು.
ಕೃಷ್ಣ ತನ್ನನ್ನು ಮದುವೆಯಾಗುವಂತೆ ಸೋನುವಿನ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದ್ದು,ಆಕೆಯ ನಿರಾಕರಣೆ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.







