ಸಮೀಕ್ಷೆಯ ವೇಳೆ ಒತ್ತಡದಲ್ಲಿದ್ದೀರಾ ಎಂದು ಪ್ರಶ್ನಿಸಿದ ಕಂಪೆನಿ ; ಹೌದು ಎಂದಿದ್ದಕ್ಕೆ ಉದ್ಯೋಗಿಗಳ ವಜಾ!

pic | Shitiz Dogra/LinkedIn
ನೊಯ್ಡಾ : ಸಲೂನ್ ಹೋಮ್ ಸರ್ವಿಸ್ ಸ್ಟಾರ್ಟ್ ಅಪ್ ಕಂಪೆನಿ ʼಯೆಸ್ ಮೇಡಮ್ʼ ಸ್ವಯಂ ನಡೆಸಿದ ಸಮೀಕ್ಷೆಯಲ್ಲಿ ಕೆಲಸದ ಹೊರೆಯಿಂದಾಗಿ ಒತ್ತಡವನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸ್ಟಾರ್ಟಪ್ ಕಂಪೆನಿ ಯೆಸ್ ಮೇಡಮ್, ಸಮೀಕ್ಷೆಯ ಆಧಾರದ ಮೇಲೆ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಹೇಳಲಾಗಿದೆ. ಕಂಪೆನಿಯ HR ಕಳುಹಿಸಿದ್ದಾರೆ ಎನ್ನಲಾದ ಇ-ಮೇಲ್ ಸಂದೇಶದಲ್ಲಿ, ಸಮೀಕ್ಷೆಯ ಫಲಿತಾಂಶ ಸಿಬ್ಬಂದಿಗಳನ್ನು ವಜಾಗೊಳಿಸಲು ಕಾರಣವಾಗಿದೆ ಎಂದು ತಿಳಿಸಿದೆ. ಆದರೆ, ಇ-ಮೇಲ್ ವೈರಲ್ ಸ್ಕ್ರೀನ್ ಶಾಟ್ ನ ಸತ್ಯಾಸತ್ಯತೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು INDIA TODAY ವರದಿ ಮಾಡಿದೆ.
►ವೈರಲ್ ಸ್ಕ್ರೀನ್ ಶಾಟ್ ನಲ್ಲಿ ಏನಿತ್ತು?
ಇತ್ತೀಚೆಗೆ, ಕೆಲಸದಲ್ಲಿನ ಒತ್ತಡದ ಬಗ್ಗೆ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಾವು ಸಮೀಕ್ಷೆಯನ್ನು ನಡೆಸಿದ್ದೇವೆ. ನಿಮ್ಮಲ್ಲಿ ಹಲವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನಾವು ಆಳವಾಗಿ ಗೌರವಿಸುತ್ತೇವೆ. ಆರೋಗ್ಯಕರ ಮತ್ತು ಬೆಂಬಲದಾಯಕ ಕೆಲಸದ ವಾತಾವರಣವನ್ನು ಸೃಷ್ಟಿಸಲು ಬದ್ಧವಾಗಿರುವ ಕಂಪೆನಿಯಾಗಿ, ನಾವು ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದೇವೆ. ಒತ್ತಡದಲ್ಲಿದ್ದಾರೆ ಎಂದು ಹಲವರು ಹೇಳಿದ ನಂತರ ಯಾರೂ ಒತ್ತಡದಲ್ಲಿ ಕೆಲಸ ಮಾಡದಂತೆ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಹೇಳಲಾಗಿದೆ.
ನಿಮ್ಮ ಕೊಡುಗೆಗಳಿಗಾಗಿ ಧನ್ಯವಾದಗಳು. ಶುಭಾಶಯಗಳು, ʼಹೆಚ್ ಆರ್ʼ, ಯೆಸ್ ಮೇಡಮ್ ಎಂದು ಬರೆಯಲಾಗಿದೆ.
ಯೆಸ್ ಮೇಡಮ್ ನ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ. ಯೆಸ್ ಮೇಡಮ್ ನಲ್ಲಿ ಏನಾಗುತ್ತಿದೆ? ಮೊದಲು ನೀವು ಸಮೀಕ್ಷೆಯನ್ನು ನಡೆಸಿ ನಂತರ ನಾವು ಒತ್ತಡವನ್ನು ಅನುಭವಿಸುತ್ತಿದ್ದೇವೆ ಎಂದ ಕಾರಣಕ್ಕೆ ರಾತ್ರೋರಾತ್ರಿ ಕೆಲಸದಿಂದ ವಜಾಗೊಳಿಸುತ್ತೀರಾ? ನನ್ನನ್ನು ಮಾತ್ರವಲ್ಲದೆ 100 ಜನರನ್ನು ವಜಾ ಮಾಡಲಾಗಿದೆ ಎಂದು ಸಿಬ್ಬಂದಿಯೋರ್ವರು ಈ ಕುರಿತು ಎಕ್ಸ್ ನಲ್ಲಿ ಟೀಕಿಸಿದ್ದಾರೆ.







