RAW ಮಾಜಿ ಅಧಿಕಾರಿ ವಿಕಾಸ್ ಯಾದವ್ ಗೆ ಜಾಮೀನು ರಹಿತ ವಾರಂಟ್

PC: x.com/Jansatta
ಹೊಸದಿಲ್ಲಿ: ನಗರದ ಉದ್ಯಮಿಯೊಬ್ಬರ ಅಪಹರಣ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ (RAW)ನ ಮಾಜಿ ಅಧಿಕಾರಿ ವಿಕಾಸ್ ಯಾದವ್ ಅವರ ವಿರುದ್ಧ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಪಿತೂರಿಯಲ್ಲಿ ಅಮೆರಿಕ ಇವರ ವಿರುದ್ಧ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಅವರು ಆಗಸ್ಟ್ 25ರಂದು ಈ ಸಂಬಂಧ ಆದೇಶ ನೀಡಿದ್ದಾರೆ. "ಉದ್ಯಮಿಯ ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಸಾಕಷ್ಟು ಬಾರಿ ಸಮನ್ಸ್ ನೀಡಿ ಅವಕಾಶಗಳನ್ನು ಕೊಟ್ಟರೂ ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಯಾದವ್ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 491 (ಬಾಂಡ್ ಮುಟ್ಟುಗೋಲು ಹಾಕಿಕೊಂಡ ಸಂದರ್ಭದಲ್ಲಿ ಅನುಸರಿಸುವ ವಿಧಾನ) ಅನ್ವಯ "ನೋಟಿಸ್ ಟೂ ಶೂರಿಟಿ" ನೀಡಿದ್ದು, ಅಕ್ಟೋಬರ್ 17ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.
ಪನ್ನೂನ್ ಅವರ ಹತ್ಯೆಯ ವಿಫಲ ಯತ್ನದ ಸಂಚಿನಲ್ಲಿ ಷಾಮೀಲಾದ ಬಗ್ಗೆ ಯಾದವ್ ವಿರುದ್ಧ ಅಮೆರಿಕ ಆರೋಪ ಹೊರಿಸಿದ ಬಳಿಕ ದೆಹಲಿ ಪೊಲೀಸರು 2023ರ ಡಿಸೆಂಬರ್ನಲ್ಲಿ ಯಾದವ್ ಅವರನ್ನು ಬಂಧಿಸಿದ್ದರು. 2024ರ ಮಾರ್ಚ್ನಲ್ಲಿ ಅಪಹರಣ- ಸುಲಿಗೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, 2024ರ ಏಪ್ರಿಲ್ ನಲ್ಲಿ ಯಾದವ್ ಜಾಮೀನು ಪಡೆದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್ ನಲ್ಲಿ ಅವರ ವೈಯಕ್ತಿಕ ವಿವರಗಳು ಬಹಿರಂಗವಾದಲ್ಲಿ ಜೀವಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಯಾದವ್ ಗೆ ವೈಯಕ್ತಿಕವಾಗಿ ಹಾಜರಾಗುವುದರಿಂದ ನ್ಯಾಯಾಲಯ ವಿನಾಯಿತಿ ನೀಡಿತ್ತು.







