ಉತ್ತರ ಭಾರತವನ್ನು ವ್ಯಾಪಿಸಿದ ಶೀತ ಮಾರುತ; ಹೆಪ್ಪುಗಟ್ಟಿದ ದಾಲ್ ಸರೋವರ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ಜ. 15: ಶೀತ ಮಾರುತವು ಬುಧವಾರ ಉತ್ತರ ಭಾರತದ ಹೆಚ್ಚಿನ ಭಾಗಗಳನ್ನು ವ್ಯಾಪಿಸಿದೆ. ದಿಲ್ಲಿ, ಕಾಶ್ಮೀರ, ರಾಜಸ್ಥಾನ, ಹರ್ಯಾಣ ಮತ್ತು ಪಂಜಾಬ್ ನಲ್ಲಿ ಉಷ್ಣತೆಯು ತೀವ್ರವಾಗಿ ಕುಸಿದಿದೆ ಹಾಗೂ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಕವಿದಿದೆ.
ದಿಲ್ಲಿಯಲ್ಲಿ 3.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣತೆ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 3.6 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಿಲ್ಲಿಯ ಗರಿಷ್ಠ ಉಷ್ಣತೆ 20 ಡಿಗ್ರಿ ಸೆಲ್ಸಿಯಸ್ ನ ಆಸುಪಾಸು ಇತ್ತು.
ದಿಲ್ಲಿಯ ವಾಯು ಗುಣಮಟ್ಟವೂ ಕುಸಿದಿದೆ. ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು 354 ಆಗಿದ್ದು, ಇದು ‘‘ಅತ್ಯಂತ ಕಳಪೆ’’ ವಿಭಾಗದಲ್ಲಿ ಬರುತ್ತದೆ. ಜಹಾಂಗಿರ್ ಪುರಿಯಲ್ಲಿ ಅತ್ಯಂತ ಕಳಪೆ ವಾಯು ಗುಣಮಟ್ಟ ಸೂಚ್ಯಂಕ 420 ದಾಖಲಾಗಿದೆ. ಕಾಶ್ಮೀರದಲ್ಲಿ ದಾಲ್ ಸರೋವರದ ಕೆಲವು ಭಾಗಗಳು ಮತ್ತು ಇತರ ಹಲವು ಕೆರೆಗಳು ಹೆಪ್ಪುಗಟ್ಟಿವೆ. ಅಲ್ಲಿನ ಉಷ್ಣತೆ ಸೊನ್ನೆ ಡಿಗ್ರಿ ಸೆಲ್ಸಿಯಸ್ನಿಂದಲೂ ಕೆಳಗೆ ಕುಸಿದಿದೆ. ಶ್ರೀನಗರದಲ್ಲಿ ಮಂಗಳವಾರ ರಾತ್ರಿ ಮೈನಸ್ 5.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣತೆ ದಾಖಲಾಗಿದೆ.







