ಉತ್ತರ ಸಿಕ್ಕಿಂ:ರಕ್ಷಣಾ ಕಾರ್ಯಾಚರಣೆ ಪುನರಾರಂಭ
ಗ್ಯಾಂಗ್ಟಕ್ಗೆ 59 ಪ್ರವಾಸಿಗಳ ಸ್ಥಳಾಂತರ

PC : PTI
ಗ್ಯಾಂಗ್ಟಕ್: ಹವಾಮಾನದಲ್ಲಿ ಸುಧಾರಣೆಯಾಗಿರುವ ಹಿನ್ನೆಲೆಯಲ್ಲಿ ಭಾರೀ ಮಳೆಯಿಂದ ತತ್ತರಿಸಿದ್ದ ಉತ್ತರ ಸಿಕ್ಕಿಮ್ ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಪುನರಾರಂಭಗೊಂಡಿದ್ದು, ಕಳೆದೊಂದು ವಾರದಿಂದ ಲಚುಂಗ್ ನಲ್ಲಿ ಸಿಕ್ಕಿಹಾಕಿಕೊಂಡಿರುವ 109 ಪ್ರವಾಸಿಗಳ ಪೈಕಿ 59 ಜನರನ್ನು ಗುರುವಾರ ಬೆಳಿಗ್ಗೆ ಗ್ಯಾಂಗ್ಟಕ್ ಗೆ ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ.
ಗುರುವಾರ ನಸುಕಿನಲ್ಲಿ ಗ್ಯಾಂಗ್ಟಕ್ ಸಮೀಪದ ಪಾಕ್ಯೋಂಗ್ ವಿಮಾನ ನಿಲ್ದಾಣದಿಂದ ಎರಡು ಹೆಲಿಕಾಪ್ಟರ್ ಗಳನ್ನು ಉತ್ತರ ಸಿಕ್ಕಿಮ್ ನ ಚಾಟೆನ್ ಗೆ ರವಾನಿಸಲಾಗಿತ್ತು. ಒಂದು ಹೆಲಿಕಾಪ್ಟರ್ ನಲ್ಲಿ 39 ಮತ್ತು ಇನ್ನೊಂದು ಹೆಲಿಕಾಪ್ಟರ್ ನಲ್ಲಿ 20 ಪ್ರವಾಸಿಗಳನ್ನು ಗ್ಯಾಂಗ್ಟಕ್ ಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ರಕ್ಷಿಸಲ್ಪಟ್ಟವರಲ್ಲಿ ಇಬ್ಬರು ವಿದೇಶಿಯರು ಸೇರಿದ್ದಾರೆ.
ರಕ್ಷಿಸಲ್ಪಟ್ಟ ಪ್ರವಾಸಿಗಳನ್ನು ಪ.ಬಂಗಾಳದ ಸಿಲಿಗುರಿಗೆ ಕರೆದೊಯ್ಯಲು ಸಿಕ್ಕಿಂ ರಾಷ್ಟ್ರೀಕೃತ ಸಾರಿಗೆ(ಎಸ್ಎನ್ಟಿ)ಯ ಬಸ್ ಗಳನ್ನು ನಿಯೋಜಿಸಲಾಗಿದೆ.
ವಾಯುಮಾರ್ಗದ ಮೂಲಕ ಸಿಲಿಗುರಿ ಸಮೀಪದ ಬಾಗ್ಡೋಗ್ರಾಕ್ಕೆ ತೆರಳಲು ಬಯಸುವವರಿಗಾಗಿ ಪಾಕ್ಯೋಂಗ್ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಹೆಲಿಕಾಪ್ಟರ್ ನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.
ಎರಡು ಹೆಲಿಕಾಪ್ಟರ್ ಗಳು ಎನ್ ಡಿಆರ್ ಎಫ್ ಮತ್ತು ವಿದ್ಯುತ್ ಇಲಾಖಾ ಸಿಬ್ಬಂದಿಗಳು ಹಾಗೂ ಏರ್ ಟೆಲ್ ನ ಇಂಜನಿಯರ್ ಗಳನ್ನು ಚಾಟನ್ ಗೆ ಕರೆದೊಯ್ದಿದ್ದು,ಅವರು ಪ್ರದೇಶದಲ್ಲಿ ಅಗತ್ಯ ಸೇವೆಗಳ ಮರುಸ್ಥಾಪನೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಪ್ರವಾಸಿಗಳನ್ನು ಚಾಟೆನ್ಗೆ ಕರೆತರಲಾಗಿದ್ದು,ಹೋಟೆಲ್ ಗಳು ಮತ್ತು ಮಿಲಿಟರಿ ಶಿಬಿರದಲ್ಲಿ ಉಳಿಸಲಾಗಿದೆ.
ಉತ್ತರ ಸಿಕ್ಕಿಮ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪೋಕ್ಯಾಂಗ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ವಿಳಂಬಕ್ಕೆ ಕಾರಣವಾಗಿತ್ತು.
ರವಿವಾರ ಚಾಟೆನ್ ನಲ್ಲಿಯ ಮಿಲಿಟರಿ ಶಿಬಿರವೊಂದು ಭೂಕುಸಿತಕ್ಕೆ ಸಿಲುಕಿದ್ದು,ಮೂವರು ಯೋಧರು ಮೃತಪಟ್ಟು,ಇತರ ಆರು ಯೋಧರು ನಾಪತ್ತೆಯಾಗಿದ್ದಾರೆ. ಪ್ರತಿಕೂಲ ಹವಾಮಾನ,ಅಲ್ಲಲ್ಲಿ ಕುಸಿದಿರುವ ನೆಲ ಮತ್ತು ಎತ್ತರದ ಪ್ರದೇಶ ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿಯನ್ನುಂಟು ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದರು.







