ನಾರ್ವೆ ಚೆಸ್ ಪಂದ್ಯಾವಳಿ | 2ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಸೋಲು, ವೈಶಾಲಿಗೆ ಗೆಲುವು

ಆರ್. ಪ್ರಜ್ಞಾನಂದ | PC: DDNEWS
ಸ್ಟಾವಂಜರ್ (ನಾರ್ವೆ): ನಾರ್ವೆಯ ಸ್ಟಾವಂಜರ್ ನಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ, ಭಾರತೀಯ ಗ್ರಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಸೋಲನುಭವಿಸಿದ್ದಾರೆ.
ಪ್ರಜ್ಞಾನಂದ ಮತ್ತು ಲಿರೆನ್ ನಡುವಿನ ಪಂದ್ಯವು ನಿಯಮಿತ ಸಮಯದಲ್ಲಿ ಡ್ರಾದೊಂದಿಗೆ ಕೊನೆಗೊಂಡಿತು. ಹಾಗಾಗಿ ಇಬ್ಬರ ನಡುವೆ ಟೈಬ್ರೇಕರ್ ನಡೆದಾಗ ಪ್ರಜ್ಞಾನಂದ ಸೋಲನುಭವಿಸಿದರು.
ಈ ಪ್ರತಿಷ್ಠಿತ ಪಂದ್ಯಾವಳಿಯ ಎರಡನೆ ಸುತ್ತಿನಲ್ಲಿ ಎಲ್ಲಾ ಮೂರು ಕ್ಲಾಸಿಕಲ್ ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡವು. ಬಳಿಕ ನಡೆದ ಟೈಬ್ರೇಕರ್ ಗಳಲ್ಲಿ ಮಾಗ್ನಸ್ ಕಾರ್ಲ್ಸನ್, ಅಲಿರೆಝ ಫಿರೋಝ ಮತ್ತು ಲಿರೆನ್ ವಿಜಯಿಯಾದರು. ಅವರು ತಲಾ 1.5 ಅಂಕಗಳನ್ನು ಗಳಿಸಿದರು.
ಇದು ಪ್ರಧಾನ ಸುತ್ತಿನಲ್ಲಿ ಪ್ರಜ್ಞಾನಂದರ ಮೊದಲ ಕ್ಲಾಸಿಕಲ್ ಡ್ರಾ ಆಗಿದೆ.
ಕಾರ್ಲ್ಸನ್ 3 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.
ಮಹಿಳೆಯರ ವಿಭಾಗದಲ್ಲಿ, ಭಾರತದ ಆರ್. ವೈಶಾಲಿ ತನ್ನದೇ ದೇಶದ ಕೊನೆರು ಹಂಪಿಯನ್ನು ಸೋಲಿಸಿ ಪಂದ್ಯಾವಳಿಯಲ್ಲಿ ತನ್ನ ಮೊದಲ ಕ್ಲಾಸಿಕಲ್ ಜಯ ಸಂಪಾದಿಸಿದರು.
ಈ ವಿಜಯದೊಂದಿಗೆ, ವೈಶಾಲಿ ಲೈವ್ ರೇಟಿಂಗ್ ಪಟ್ಟಿಯಲ್ಲಿರುವ ಭಾರತದ ಎರಡನೇ ಮಹಿಳಾ ಆಟಗಾರ್ತಿಯಾದರು.





