ಆಪ್ ಪಕ್ಷವನ್ನು ಗೆಲ್ಲಿಸುವುದು ನಮ್ಮ ಜವಾಬ್ಧಾರಿಯಲ್ಲ: ದಿಲ್ಲಿಯಲ್ಲಿ ಸೋಲು ಎದುರಿಸುತ್ತಿರುವ ಆಪ್ ಬಗ್ಗೆ ಕಾಂಗ್ರೆಸ್ ಟೀಕೆ

ಸುಪ್ರಿಯಾ ಶ್ರಿನೇತ್ (Photo: NDTV)
ಹೊಸದಿಲ್ಲಿ : ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಆಡಳಿತರೂಢ ಆಪ್ ಪಕ್ಷವು ಹಿನ್ನಡೆಯನ್ನು ಅನುಭವಿಸುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರಿನೇತ್, ಆಪ್ ಪಕ್ಷವನ್ನು ಗೆಲ್ಲಿಸುವುದು ಕಾಂಗ್ರೆಸ್ ನ ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ.
ʼಆಪ್ ಅನ್ನು ಗೆಲ್ಲಿಸುವ ಜವಾಬ್ದಾರಿ ಕಾಂಗ್ರೆಸ್ ಮೇಲಿಲ್ಲ, ನಾವು ರಾಜಕೀಯ ಭದ್ರಕೋಟೆಗಳನ್ನು ಹುಡುಕುತ್ತೇವೆ ಮತ್ತು ಗೆಲ್ಲಲು ಪ್ರಯತ್ನಿಸುತ್ತೇವೆ, ದಿಲ್ಲಿಯು ನಾವು 15 ವರ್ಷ ಆಡಳಿತ ನಡೆಸಿದ ಸ್ಥಳವಾಗಿದೆ. ನಮ್ಮ ಜವಾಬ್ದಾರಿಯು ಪ್ರಬಲ ಸ್ಪರ್ಧೆ ನೀಡುವುದಾಗಿದೆ. ಅರವಿಂದ್ ಕೇಜ್ರಿವಾಲ್ ಗೋವಾ, ಹರ್ಯಾಣ, ಗುಜರಾತ್, ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಗೋವಾ ಮತ್ತು ಉತ್ತರಾಖಂಡದಲ್ಲಿ ನಮ್ಮ ಮತ್ತು ಬಿಜೆಪಿ ನಡುವಿನ ಮತ ಹಂಚಿಕೆಯ ವ್ಯತ್ಯಾಸವು ಆಪ್ ಗೆ ನಿಖರವಾಗಿ ಸಿಕ್ಕಿದೆ. ಅಲ್ಲಿ ಮೈತ್ರಿ ಮಾಡುತ್ತಿದ್ದರೆ ಬಿಜೆಪಿಯನ್ನು ಸೋಲಿಸಬಹುದಿತ್ತು ಎಂದು ಹೇಳಿದ್ದಾರೆ.
ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಸ್ಥಾಪಿಸಿದ INDIA ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿ ಬಂದ ಹಿನ್ನೆಲೆ ಸುಪ್ರಿಯಾ ಶ್ರಿನೇತ್ ಈ ಹೇಳಿಕೆಯನ್ನು ನೀಡಿದ್ದಾರೆ.





