ರೈತರಿಗೆ ನೀಡುತ್ತಿರುವುದು ಪ್ರಸಾದವಲ್ಲ, ಅದು ಅವರ ನ್ಯಾಯಯುತ ಹಕ್ಕು : ಪಿಎಂ-ಕಿಸಾನ್ ಯೋಜನೆಯ ಕುರಿತು ಕಾಂಗ್ರೆಸ್ ವ್ಯಂಗ್ಯ

Photo : PTI
ಹೊಸದಿಲ್ಲಿ: ಪಿಎಂ-ಕಿಸಾನ್ ಯೋಜನೆಯಡಿ ರೈತರಿಗೆ ನೀಡಲಾಗುತ್ತಿರುವ ನೆರವು ಅವರ ನ್ಯಾಯಯುತ ಹಕ್ಕೇ ಹೊರತು ಪ್ರಸಾದವಲ್ಲ ಎಂದು ಮಂಗಳವಾರ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಮಂಗಳವಾರ ಪಿಎಂ-ಕಿಸಾನ್ ಯೋಜನೆಯ 17ನೇ ಕಂತು ಅರ್ಹ ಫಲಾನುಭವಿ ರೈತರ ಖಾತೆಗಳಿಗೆ ಜಮೆಯಾಗಲಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “1/3 ಪ್ರಧಾನ ಮಂತ್ರಿಯು ಜೂನ್ 9ರಂದು ಅಧಿಕಾರ ಸ್ವೀಕರಿಸಿದರು. ಆಗ ಅವರು ಸಹಿ ಮಾಡಿದ ಮೊತ್ತ ಮೊದಲ ಕಡತ ಪಿಎಂ-ಕಿಸಾನ್ ಯೋಜನೆಯ 17ನೇ ಕಂತಿನ ಬಿಡುಗಡೆಯದ್ದು ಎಂದು ಪತ್ರಿಕೆಗಳ ಮುಖಪುಟ ಶೀರ್ಷಿಕೆಗಳಲ್ಲಿ ಬೊಬ್ಬೆ ಹೊಡೆಯಲಾಯಿತು. ಇಂದು 1/3 ಪ್ರಧಾನ ಮಂತ್ರಿಯು ಮತ್ತೆ ಪಿಎಂ-ಕಿಸಾನ್ ಯೋಜನೆಯ 17ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪತ್ರಿಕೆಗಳ ಶೀರ್ಷಿಕೆಗಳಲ್ಲಿ ಬೊಬ್ಬೆ ಹೊಡೆಯಲಾಗಿದೆ. ಮುಖಪುಟದ ಶೀರ್ಷಿಕೆಗಳನ್ನು ಮರು ಬಳಸುವ ರೀತಿ ಇದಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಇಂದು ಅಜೈವಿಕ ಪ್ರಧಾನ ಮಂತ್ರಿಗಳು ರೈತರಿಗೆ ಒಂದಿಷ್ಟು ಪ್ರಸಾದವನ್ನು ಹಂಚುತ್ತಿದ್ದಾರೆ. ಆದರೆ, ಅದು ರೈತರ ನ್ಯಾಯಯುತ ಹಕ್ಕು ಮತ್ತು ಅರ್ಹತೆಯಾಗಿದೆ” ಎಂದೂ ಅವರು ಲೇವಡಿ ಮಾಡಿದ್ದಾರೆ.
ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೆಯ ಬಾರಿಗೆ ಗೆಲುವು ಸಾಧಿಸಿದ ನಂತರ ಇದೇ ಪ್ರಥಮ ಬಾರಿಗೆ ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಪಿಎಂ-ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಪಾಲ್ಗೊಂಡು, 9.26 ಕೋಟಿಗೂ ಹೆಚ್ಚು ರೈತರಿಗೆ ಸುಮಾರು 20,000 ಕೋಟಿ ರೂಪಾಯಿ ನೆರವನ್ನು ಬಿಡುಗಡೆ ಮಾಡಲಿದ್ದಾರೆ.







