9000 ಕೋಟಿ ರೂ.ಪಾವತಿಸಲು ಬೈಜುಸ್ ಗೆ ಈಡಿ ನೋಟಿಸ್
ವಿದೇಶಿ ಧನಸಹಾಯ ಕಾನೂನುಗಳ ಉಲ್ಲಂಘನೆ

ಬೈಜುಸ್ | Photo: PTI
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಈಡಿ)ವು ವಿದೇಶಿ ಧನಸಹಾಯ ಕಾನೂನುಗಳ ಉಲ್ಲಂಘನೆ ಆರೋಪದಲ್ಲಿ 9,000 ಕೋಟಿ ರೂ.ಗಳನ್ನು ಪಾವತಿಸುವಂತೆ ಪ್ರಮುಖ ಆನ್ಲೈನ್ ಶಿಕ್ಷಣ ಸಂಸ್ಥೆ ಬೈಜುಸ್ ಗೆ ನೋಟಿಸ್ ಹೊರಡಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದರೆ ತನಗೆ ಇಂತಹ ಯಾವುದೇ ನೋಟಿಸ್ ಬಂದಿರುವುದನ್ನು ಬೈಜುಸ್ ನಿರಾಕರಿಸಿದೆ.
ಈಡಿಯಲ್ಲಿನ ಮೂಲಗಳ ಪ್ರಕಾರ, ಬೈಜುಸ್ 2011 ಮತ್ತು 2023ರ ನಡುವೆ ಸುಮಾರು 28,000 ಕೋಟಿ ರೂ.ಗಳ ವಿದೇಶಿ ನೇರ ಹೂಡಿಕೆ (ಎಫ್ಡಿಐ)ಯನ್ನು ಸ್ವೀಕರಿಸಿತ್ತು ಮತ್ತು ಇದೇ ಅವಧಿಯಲ್ಲಿ ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ಸುಮಾರು 9,754 ಕೋಟಿ ರೂ.ಗಳನ್ನು ವಿದೇಶಗಳಿಗೆ ರವಾನಿಸಿತ್ತು.
‘ನಮ್ಮಿಂದ ಯಾವುದೇ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ)ಯ ಉಲ್ಲಂಘನೆಯನ್ನು ಸೂಚಿಸುವ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಅಧಿಕಾರಿಗಳಿಂದ ಇಂತಹ ಯಾವುದೇ ನೋಟಿಸನ್ನು ಕಂಪನಿಯು ಸ್ವೀಕರಿಸಿಲ್ಲ ’ಎಂದು ಬೈಜುಸ್ x ಪೋಸ್ಟಿನಲ್ಲಿ ತಿಳಿಸಿದೆ. ಈಡಿ ನೋಟಿಸ್ ಒಂದು ಕಾಲದಲ್ಲಿ ದೇಶದ ಅತ್ಯಂತ ಮೌಲ್ಯಯುತ ಸ್ಟಾರ್ಟಪ್ ಆಗಿದ್ದ ಬೈಜುಸ್ ಇಂದು ಏನಾಗಿದೆ ಎನ್ನುವುದನ್ನು ತಿಳಿಸುವ ಇತ್ತೀಚಿನ ಬೆಳವಣಿಗೆಯಾಗಿದೆ.
ಉತ್ತುಂಗದಿಂದ ಅವನತಿಯತ್ತ:
ಇಂಜಿನಿಯರ್ ಮತ್ತು ಶಿಕ್ಷಕರಾಗಿದ್ದ ಬೈಜು ರವೀಂದ್ರನ್ ಮತ್ತು ಅವರ ಪತ್ನಿ ದಿವ್ಯಾ ಗೋಕುಲನಾಥ್ 2011ರಲ್ಲಿ ಬೈಜುಸ್ನ ಮಾತೃಸಂಸ್ಥೆಯಾದ ಥಿಂಕ್ ಆ್ಯಂಡ್ ಲರ್ನ್ ಪ್ರೈ.ಲಿ.ಅನ್ನು ಸ್ಥಾಪಿಸಿದ್ದರು. ಆರಂಭದಲ್ಲಿ ಅದು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆನ್ಲೈನ್ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿತ್ತು.
2015ರಲ್ಲಿ ಕಂಪನಿಯು ಬೈಜುಸ್ ಆ್ಯಪ್ ಆರಂಭಿಸಿದ್ದು,ಅದು ತ್ವರಿತ ಬೆಳವಣಿಗೆಯನ್ನು ಸಾಧಿಸಿತ್ತು. ಎರಡು ವರ್ಷಗಳ ನಂತರ ಕಂಪನಿಯು ಮಕ್ಕಳಿಗಾಗಿ ಗಣಿತ ಆ್ಯಪ್ ಮತ್ತು ಪೋಷಕರು ತಮ್ಮ ಮಕ್ಕಳ ಪ್ರಗತಿಯ ಮೇಲೆ ನಿಗಾಯಿರಿಸಲು ನೆರವಾಗುವ ಇನ್ನೊಂದು ಆ್ಯಪ್ ಆರಂಭಿಸಿತ್ತು. 2018ರ ವೇಳೆಗೆ ಭಾರತದ ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳ ಮಿಲಿಯಾಂತರ ಮನೆಗಳನ್ನು ತಲುಪಿದ್ದ ಕಂಪನಿಯು 1.5 ಕೋಟಿ ಗೂ ಅಧಿಕ ಬಳಕೆದಾರರನ್ನು ಹೊಂದಿತ್ತು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಶಾಲೆಗಳು ಮುಚ್ಚಿ ಮಕ್ಕಳು ಡಿಜಿಟಲ್ ಶಿಕ್ಷಣ ವಿಧಾನಕ್ಕೆ ಬದಲಾದಾಗ ಕಂಪನಿಯ ಜನಪ್ರಿಯತೆಯು ಉತ್ತುಂಗಕ್ಕೇರಿತ್ತು.
ನಂತರ ಕಂಪನಿಯ ಅವನತಿ ಆರಂಭಗೊಂಡಿತ್ತು. 2021ರಲ್ಲಿ ಭಾರೀ ನಷ್ಟವನ್ನು ದಾಖಲಿಸಿದ ಬಳಿಕ ಅದರ ಮೌಲ್ಯ ಕ್ರಮೇಣ ಕುಸಿಯತೊಡಗಿತ್ತು. ಶೀಘ್ರವೇ ಅದು ಕಾನೂನು ಜಾರಿ ಸಂಸ್ಥೆಗಳ ನಿಗಾಕ್ಕೊಳಪಟ್ಟಿತ್ತು.
ಬೈಜುಸ್ ನ ಅವನತಿಗೆ ಕಾರಣಗಳಲ್ಲಿ ಅದರ ಬೃಹತ್ ಹೂಡಿಕೆಯೂ ಒಂದು ಕಾರಣವಾಗಿದೆ. ಸಾಂಕ್ರಾಮಿಕದ ಬಳಿಕ ಮಕ್ಕಳು ಶಾಲೆಗಳಿಗೆ ಮರಳಿದಾಗ ಮತ್ತು ಉದ್ಯಮವು ಕುಸಿದಾಗ ಈ ಹೂಡಿಕೆ ಹೊರೆಯಾಗಿ ಪರಿಣಮಿಸಿತ್ತು.
ತನ್ನ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಆರೋಪಗಳನ್ನೂ ಬೈಜುಸ್ ಎದುರಿಸಿತ್ತು. ಅದು ದುಬಾರಿ ಕೋರ್ಸ್ ಗಳನ್ನು ಖರೀದಿಸುವಂತೆ ತಮಗೆ ಬಲವಂತ ಮಾಡುತ್ತಿದೆ ಮತ್ತು ನಂತರ ತನ್ನ ಭರವಸೆಯಿಂದ ಹಿಂದೆ ಸರಿಯುತ್ತಿದೆ ಎಂದು ಪೋಷಕರು ಆರೋಪಿಸಿದ್ದರು. ತನ್ನ ಉದ್ಯೋಗಿಗಳನ್ನು ಕಳಪೆಯಾಗಿ ನಡೆಸಿಕೊಂಡಿದ್ದ ಆರೋಪಕ್ಕೂ ಗುರಿಯಾಗಿದ್ದ ಕಂಪನಿಯು ತನ್ನ ವೆಚ್ಚಗಳನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡುವ ಮೂಲಕ ಸುದ್ದಿಯಾಗಿತ್ತು.
ಈ ವರ್ಷದ ಪೂರ್ವಾರ್ಧದಲ್ಲಿ ಈಡಿ ವಿದೇಶಿ ಧನಸಹಾಯ ಕಾನೂನುಗಳ ಉಲ್ಲಂಘನೆಯ ಶಂಕೆಯಲ್ಲಿ ಬೈಜುಸ್ನ ಬೆಂಗಳೂರು ಕಚೇರಿಯ ಮೇಲೆ ದಾಳಿ ನಡೆಸಿತ್ತು.
ಬೈಜುಸ್ ಸಾಲದ ಹಣವನ್ನು ಮರುಪಾವತಿಸುತ್ತಿಲ್ಲ ಮತ್ತು ಸಾಲದ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಸಾಲದಾತರು ಅಮೆರಿಕ ನ್ಯಾಯಾಲಯದ ಮೆಟ್ಟಿಲೇರಿದಾಗ ಕಂಪನಿಯು ಸಾಗರೋತ್ತರ ತೊಂದರೆಗಳನ್ನೂ ಎದುರಿಸಿತ್ತು. ಬಳಿಕ ಅದು ಕಿರುಕುಳದ ಆರೋಪ ಹೊರಿಸಿ ಸಾಲದಾತರ ವಿರುದ್ಧ ಮೊಕದ್ದಮೆ ಹೂಡಿತ್ತು.







