ಕುಖ್ಯಾತ ಗ್ಯಾಂಗ್ಸ್ಟರ್ ರಶೀದ್ ಕೇಬಲ್ ವಾಲಾ ಅಝರ್ ಬೈಜಾನ್ ನಲ್ಲಿ ಬಂಧನ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಿಲ್ಲಿಯ ಹಲವು ಹತ್ಯಾ ಪ್ರಕರಣಗಳಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಕುಖ್ಯಾತ ರೌಡಿ, ದೇಶಭ್ರಷ್ಟ, ರಶೀದ್ ಕೇಬಲ್ ವಾಲಾ ನನ್ನು ಇಸ್ತಾಂಬುಲ್ ನಿಂದ ಆಗಮಿಸುವ ವೇಳೆ ಅಝೆರ್ಬೈಜಾನ್ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ದೃಢಪಡಿಸಿವೆ. ಭಾರತೀಯ ಗುಪ್ತಚರ ಏಜೆನ್ಸಿಗಳು ಆತನನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಸಜ್ಜಾಗುತ್ತಿದ್ದಾರೆ.
ಆತನನ್ನು ಬಂಧನದಲ್ಲಿ ಇಡಲಾಗಿದೆಯೇ ಅಥವಾ ಬಾಂಡ್ ಸಲ್ಲಿಕೆ ಬಳಿಕ ಕಣ್ಗಾವಲಿನಲ್ಲಿ ಇಡಲಾಗಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರ 'ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿ ಹೆಸರಿರುವ ಕೇಬಲ್ ವಾಲಾನನ್ನು, ಪ್ರಯಾಣ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ ಬಕೂಸ್ ಹೈದರ್ ಅಲಿಯೆವ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಸಂಬಂಧಿಕರು ಸ್ಪಷ್ಟಪಡಿಸಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಕೂಡಾ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಆತನ ಅಪರಾಧ ಇತಿಹಾಸ ಮತ್ತು ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ವಿವರಿಸಿದ್ದಾರೆ.
ಸೆರೆಮನೆ ವಾಸದಲ್ಲಿರುವ ಕುಖ್ಯಾತ ರೌಡಿ ಹಶೀಂ ಬಾಬಾನ ನಿಕಟವರ್ತಿಯಾಗಿರುವ ಕೇಬಲ್vವಾಲಾ ಸದ್ಯಕ್ಕೆ ಗ್ಯಾಂಗ್ ನ ಕಾರ್ಯಾಚರಣೆಗಳ ಹೊಣೆ ಹೊತ್ತಿದ್ದ. ಈತ ಲಾರೆನ್ಸ್ ಬಿಷ್ಣೋಯಿ ಸಿಂಡಿಕೇಟ್ ಜತೆಗೂ ಸಂಬಂಧ ಹೊಂದಿದ್ದ. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಗ್ರೇಟರ್ ಕೈಲಾಶ್-1ನಲ್ಲಿ ನಡೆದ ಉದ್ಯಮಿ ನದೀರ್ ಶಾ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿತ್ತು.
ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ ಅಂದರೆ 2024ರ ಅಕ್ಟೋಬರ್ ನಲ್ಲಿ ದಿಲ್ಲಿಯಲ್ಲಿ ನಡೆದ ಅವಳಿ ಕೊಲೆ ಪ್ರಕರಣದಲ್ಲೂ ಈತ ಆರೋಪಿ. ಕಳೆದ ಡಿಸೆಂಬರ್ ನಲ್ಲಿ ದೆಹಲಿಯ ಕೃಷ್ಣನಗರದಲ್ಲಿ ಉದ್ಯಮಿ ಸುನೀಲ್ ಅವರ ಕೊಲೆ ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಾಗ ದೇಶದಿಂದ ಪಲಾಯನ ಮಾಡಿದ್ದ. ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿ ಸೇರಿದ್ದ.







