ಕೆಮ್ಮಿನ ಔಷಧಿ ಸೇವನೆಯಿಂದ 12 ಮಕ್ಕಳು ಮೃತ್ಯು : ಕೇಂದ್ರದಿಂದ ಕಟ್ಟುನಿಟ್ಟಿನ ಸೂಚನೆ

PC | timesofindia
ಭೋಪಾಲ್/ ಜೈಪುರ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಔಷಧ ಸೇವನೆ ಬಳಿಕ ಉಂಟಾದ ಆರೋಗ್ಯ ಸಮಸ್ಯೆಗಳಿಂದ 12 ಮಕ್ಕಳು ಮೃತಪಟ್ಟಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಶುಕ್ರವಾರ ಕಟ್ಟುನಿಟ್ಟಿನ ಸೂಚನೆ ಹೊರಡಿಸಿ ಎರಡು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೆಮ್ಮು ಅಥವಾ ನೆಗಡಿ ಔಷಧಿಗಳ ಸಲಹೆಯನ್ನು ವೈದ್ಯರು ನೀಡಬಾರದು ಎಂದು ಆದೇಶಿಸಿದೆ.
ಮಧ್ಯಪ್ರದೇಶದಿಂದ ಸಂಗ್ರಹಿಸಿರುವ ಯಾವುದೇ ಮಾದರಿಗಳಲ್ಲಿ ತೀವ್ರವಾಗಿ ಕಿಡ್ನಿಗೆ ಹಾನಿ ಮಾಡುವಂಥ ಡೈತಿಲಿನ್ ಗ್ಲೈಕೋಲ್ ಅಥವಾ ಎಥೆಲೀನ್ ಗ್ಲೈಕೋಲ್ ಅಂಶ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದ್ದರೂ, ಕೇಂದ್ರದ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಆದೇಶ ನೀಡಿದೆ.
ಕಲಬೆರಕೆ ಕೆಮ್ಮಿನ ಔಷಧಗಳ ಸೇವನೆ ಬಳಿಕ ಮಕ್ಕಳು ಮೂತ್ರನಾಳ ವೈಫಲ್ಯದಂಥ ಸಮಸ್ಯೆಯಿಂದ ಬಳಲಿ ಮೃತಪಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಮಧ್ಯಪ್ರದೇಶದಿಂದ ಸಂಗ್ರಹಿಸಿದ ಮಾದರಿಗಳ ಆಧಾರದಲ್ಲಿ ಕೆಮ್ಮಿನ ಔಷಧಿಯ ಕಲಬೆರಕೆ ಸಾಧ್ಯತೆಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಆದರೆ ಕಿಡ್ನಿವೈಫಲ್ಯಕ್ಕೆ ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಕಳೆದ ಒಂದು ತಿಂಗಳಲ್ಲಿ ಚಿಂದ್ವಾರಾ ಜಿಲ್ಲೆಯಲ್ಲಿ ಒಂಬತ್ತು ಮಕ್ಕಳು ಮೃತಪಟ್ಟಿದ್ದು, ಐದು ಮಂದಿ ನೆರೆಯ ಮಹಾರಾಷ್ಟ್ರದ ನಾಗ್ಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹರೇಂದ್ರ ನಾರಾಯಣ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಮುನ್ನ ಎರಡು ಬ್ರಾಂಡ್ಗಳ ಔಷಧಿ ಮಾರಾಟಕ್ಕೆ ನಿಷೇಧ ವಿಧಿಸಿತ್ತು. ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಔಷಧಿಗಳನ್ನು ಪೂರೈಸಿದ ಜಬಲ್ಪುರ ವಿತರಕರ ಬಳಿ ಇದ್ದ ಎಲ್ಲ ದಾಸ್ತಾನುಗಳನ್ನು ವಶಪಡಿಸಿಕೊಳ್ಳಲಾಗಿತ್ತು.







