ನರೇಗಾ ಹಣ ಬಿಡುಗಡೆ: ಕೇಂದ್ರದ ವಿಳಂಬವನ್ನು ಬೆಟ್ಟು ಮಾಡಿದ ಸಂಸದೀಯ ಸಮಿತಿ, ವೇತನ ಪರಿಷ್ಕರಣೆಗೆ ಕರೆ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005(ನರೇಗಾ)ರಡಿ ಕೇಂದ್ರ ಸರಕಾರದ ಪಾಲಿನ ಹಣಕಾಸು ಬಿಡುಗಡೆಯಲ್ಲಿ ನಿರಂತರ ವಿಳಂಬಗಳನ್ನು ಬೆಟ್ಟು ಮಾಡಿರುವ ಸಂಸದೀಯ ಸ್ಥಾಯಿ ಸಮಿತಿಯು, ಗ್ರಾಮೀಣ ವೇತನಗಳ ಮೇಲೆ ಹಣದುಬ್ಬರದ ನಿಜವಾದ ಪರಿಣಾಮವನ್ನು ಸರಿದೂಗಿಸಲು ವೇತನ ದರಗಳನ್ನು ಪರಿಷ್ಕರಿಸುವಂತೆ ಶಿಫಾರಸು ಮಾಡಿದೆ. ದೇಶಾದ್ಯಂತ ಏಕರೂಪ ವೇತನ ದರಗಳನ್ನು ಜಾರಿಗೊಳಿಸುವುದನ್ನು ಪರಿಶೀಲಿಸುವಂತೆ ಅದು ಸರಕಾರಕ್ಕೆ ಸೂಚಿಸಿದೆ.
ದುಡಿಮೆಯ ದಿನಗಳನ್ನು ವಾರ್ಷಿಕ 100ರಿಂದ 150 ದಿನಗಳಿಗೆ ಹೆಚ್ಚಿಸಬೇಕು, ಆಧಾರ್ ಆಧರಿತ ವೇತನ ಪಾವತಿ ವ್ಯವಸ್ಥೆಯನ್ನು ಐಚ್ಛಿಕವಾಗಿಸಬೇಕು ಮತ್ತು ಪಶ್ಚಿಮ ಬಂಗಾಳಕ್ಕೆ ತಡೆಹಿಡಿಯಲಾಗಿರುವ ಹಣವನ್ನು ಸಾಧ್ಯವಾದಷ್ಟು ಶೀಘ್ರ ಬಿಡುಗಡೆಗೊಳಿಸಬೇಕು ಎಂದೂ ಸಮಿತಿಯು ಶಿಫಾರಸು ಮಾಡಿದೆ.
ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ ಉಲಕಾ ನೇತೃತ್ವದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕುರಿತ ಸಂಸದೀಯ ಸ್ಥಾಯಿ ಸಮಿತಿಯು(2024-25) ಬುಧವಾರ ಲೋಕಸಭೆಯಲ್ಲಿ ಮಂಡಿಸಿದ ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿಯ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಭೂ ಸಂಪನ್ಮೂಲಗಳ ಇಲಾಖೆ ಹಾಗೂ ಪಂಚಾಯತ್ ರಾಜ್ ಸಚಿವಾಲಯದ ಅನುದಾನಗಳ (2025-26) ಬೇಡಿಕೆಗಳ ಕುರಿತು ತನ್ನ ಐದು,ಆರು ಮತ್ತು ಏಳನೇ ವರದಿಗಳಲ್ಲಿ ಈ ಶಿಫಾರಸುಗಳನ್ನು ಮಾಡಿದೆ.
ವೇತನ ದರಗಳ ಪರಿಷ್ಕರಣೆ ಮತ್ತು ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ವೇತನ ಅಸಮಾನತೆಗಳು ತನ್ನ ದೀರ್ಘಕಾಲಿಕ ಕಳವಳಗಳಾಗಿವೆ ಎಂದು ಹೇಳಿರುವ ಸಮಿತಿಯು, ಪ್ರಸ್ತುತ ನರೇಗಾ ವೇತನಗಳನ್ನು ಕೃಷಿ ಕಾರ್ಮಿಕರ ಬಳಕೆದಾರ ಬೆಲೆ ಸೂಚ್ಯಂಕ(ಸಿಪಿಐಎಎಲ್)ದೊಂದಿಗೆ ತಳುಕು ಹಾಕಿರುವುದು ಹಣದುಬ್ಬರ ಪ್ರವೃತ್ತಿಗಳನ್ನು ನಿಖರವಾಗಿ ಪ್ರತಿಬಿಂಬಿಸದಿರಬಹುದು. ಹೀಗಾಗಿ ವೇತನ ಲೆಕ್ಕಾಚಾರ ಪದ್ಧತಿಯನ್ನು ಪುನರ್ಪರಿಶೀಲಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದೆ.
ಯೋಜನೆಯ ಬಹುತೇಕ ಹಣವನ್ನು ಕೇಂದ್ರ ಸರಕಾರವು ಒದಗಿಸುತ್ತಿರುವುದರಿಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಏಕರೂಪ ವೇತನ ದರವನ್ನು ಜಾರಿಗೊಳಿಸುವುದನ್ನು ಪರಿಶೀಲಿಸುವಂತೆ ಸಮಿತಿಯು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇದು ಯೋಜನೆಯಡಿ ವೇತನ ಪಾವತಿಗಳಲ್ಲಿ ನ್ಯಾಯಸಮ್ಮತತೆ ಮತ್ತು ನಿರಂತರತೆಯನ್ನು ಖಚಿತಪಡಿಸಲು ನೆರವಾಗುತ್ತದೆ ಎಂದು ಅದು ಹೇಳಿದೆ.
ಯೋಜನೆಯಡಿ ತನ್ನ ಪಾಲಿನ ಹಣವನ್ನು ಬಿಡುಗಡೆಗೊಳಿಸುವಲ್ಲಿ ಕೇಂದ್ರ ಸರಕಾರದ ನಿರಂತರ ವಿಳಂಬಗಳನ್ನು ವರದಿಯಲ್ಲಿ ಬೆಟ್ಟು ಮಾಡಿರುವ ಸಂಸದೀಯ ಸಮಿತಿಯು, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಒದಗಿಸಿರುವ ಮಾಹಿತಿಯ ಪ್ರಕಾರ ಫೆ.15ಕ್ಕೆ ಇದ್ದಂತೆ ಯೋಜನೆಯಡಿ ವೇತನ ಮತ್ತು ಸಾಮಗ್ರಿ ಘಟಕಗಳ ಒಟ್ಟು ಬಾಕಿಯು 23,446.27 ಕೋಟಿ ರೂ.ಗಳಾಗಿದ್ದು, ಇದು ಪ್ರಸ್ತುತ ಬಜೆಟ್ನ ಶೇ.27.26ರಷ್ಟಿದೆ. ಅಂದರೆ ಪ್ರಸಕ್ತ ವರ್ಷಕ್ಕೆ ಹಂಚಿಕೆಯಾಗಿರುವ ಮೊತ್ತದಲ್ಲಿ ಕಾಲು ಭಾಗಕ್ಕೂ ಅಧಿಕ ಹಣ ಹಿಂದಿನ ವರ್ಷದ ಬಾಕಿಗಳನ್ನು ಪಾವತಿಸಲು ವೆಚ್ಚವಾಗಲಿದೆ. ಪರಿಣಾಮವಾಗಿ ಪ್ರಸ್ತುತ ವಿತ್ತವರ್ಷಕ್ಕೆ ವಾಸ್ತವಿಕ ಬಜೆಟ್ 62,553.73 ಕೋಟಿ ರೂ.ಗಳಿಗೆ ಇಳಿಕೆಯಾಗಲಿದೆ. ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಯೋಜನೆಯ ಸಾಮರ್ಥ್ಯವನ್ನು ಸೀಮಿತಗೊಳಿಸಲಿದೆ ಮತ್ತು ಗ್ರಾಮೀಣ ಸಂಕಷ್ಟಗಳನ್ನು ತಡೆಯುವ ಮತ್ತು ಜೀವನೋಪಾಯ ಭದ್ರತೆಯನ್ನು ಒದಗಿಸುವ ಅದರ ಮುಖ್ಯ ಉದ್ದೇಶವನ್ನು ಪೂರೈಸುವಲ್ಲಿ ಅಡ್ಡಿಯನ್ನುಂಟು ಮಾಡಲಿದೆ ಎಂದು ಸಮಿತಿಯು ಬೆಟ್ಟು ಮಾಡಿದೆ.
ರಾಜ್ಯಕ್ಕೆ ಕೇಂದ್ರ ಸರಕಾರದ ನರೇಗಾ ಹಣವನ್ನು ಬಿಡುಗಡೆ ಮಾಡಬೇಕೆಂಬ ಟಿಎಂಸಿ ನೇತೃತ್ವದ ಪ.ಬಂಗಾಳ ಸರಕಾರದ ಬೇಡಿಕೆಯನ್ನು ಬೆಂಬಲಿಸಿರುವ ಸ್ಥಾಯಿ ಸಮಿತಿಯು, ಅದಕ್ಕೆ ನ್ಯಾಯಸಮ್ಮತವಾಗಿ ಸಿಗಬೇಕಿರುವ ಪಾಲನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಶಿಫಾರಸು ಮಾಡಿದೆ.