ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು; 262 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ.23: ಮಾದಕವಸ್ತು ನಿಯಂತ್ರಣ ದಳ ಹಾಗೂ ದಿಲ್ಲಿ ಪೊಲೀಸರು ಜಂಟಿಯಾಗಿ ನಡೆಸಿದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿದ್ದು, 262 ಕೋಟಿ ರೂ. ಮೌಲ್ಯದ ಮೆಥಾಫೆಟಾಮೈನ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.
‘ಆಪರೇಶನ್ ಸ್ಪಟಿಕದ ಕೋಟೆ’ಎಂಬ ಹೆಸರಿನಲ್ಲಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ದಿಲ್ಲಿಯ ಛತರ್ಪುರ ಪ್ರದೇಶದಲ್ಲಿರುವ ಮನೆಯಿಂದ ಉತ್ಕೃಷ್ಟ ಗುಣಮಟ್ಟದ 328 ಕಿ.ಗ್ರಾಂ.ನಷ್ಟು ಮೆಥಾಫೆಟಾಮೈನ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ಮೂಲಗಳು ತಿಳಿಸಿವೆ.
ಹಲವು ತಿಂಗಳಿಂದ ಬೇಹುಗಾರಿಕೆ ಹಾಗೂ ತಾಂತ್ರಿಕ ಕದ್ದಾಲಿಕೆಗಳ ಮೂಲಕ ಸತತವಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮವಾಗಿ ಅತ್ಯಂತ ಸುಸಂಘಟಿತವಾಗಿದ್ದ ಈ ಮಾದಕದ್ರವ್ಯ ಕಳ್ಳಸಾಗಣೆ ಜಾಲ ಸರಪಣಿಯನ್ನು ಭೇದಿಸಲು ಸಾಧ್ಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನಾಗಾಲ್ಯಾಂಡ್ನ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇವರ ನಿವಾಸದಲ್ಲಿ ಈ ಮಾದಕದ್ರವ್ಯವನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿತ್ತು. ವಿದೇಶದಿಂದ ಕಾರ್ಯಾಚರಿಸುತ್ತಿರುವ ಜಾಲದ ಕಿಂಗ್ಪಿನ್ ಸೇರಿದಂತೆ ಅದನ್ನು ನಿರ್ವಹಿಸುತ್ತಿರುವ ಇತರ ಆರೋಪಿಗಳನ್ನು ಕೂಡಾ ಗುರುತಿಸಲಾಗಿ. ಈ ಜಾಲದ ಸೂತ್ರಧಾರಿಯು ಈ ಹಿಂದೆ ದಿಲ್ಲಿಯಲ್ಲಿ 82.5 ಗ್ರಾಂ. ಉನ್ನತ ದರ್ಜೆ ಕೊಕೈನ್ ಮಾದಕದ್ರವ್ಯ ಪತ್ತೆ ಪ್ರಕರಣದಲ್ಲಿ ದಿಲ್ಲಿಯ ಎನ್ಸಿಬಿಗೆ ಬೇಕಾಗಿದ್ದಾನೆ. ಈತನನ್ನು ಭಾರತಕ್ಕೆ ಕರೆತರಲು ಅಂತಾರಾಷ್ಟ್ರೀಯ ಕಾನೂನು ಅನುಷ್ಠಾನದ ಭಾಗೀದಾರರ ಜೊತೆ ಮಾತುಕತೆಗಳು ನಡೆಯುತ್ತಿವೆ ಎಂದು ಎನ್ಸಿಬಿ ಮೂಲಗಳು ತಿಳಿಸಿವೆ.
ಆಪರೇಶನ್ ಸ್ಫಟಿಕದ ಕೋಟೆ ಕಾರ್ಯಾಚರಣೆಯ ಮೂಲಕ ಅಂತಾರಾಷ್ಟ್ರೀಯ ಮಾದಕದ್ರವ್ಯ ಜಾಲವನ್ನು ಭೇದಿಸಿದ ಎನ್ಸಿಬಿ ಹಾಗೂ ದಿಲ್ಲಿ ಪೊಲೀಸರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು ‘‘ನಮ್ಮ ಸರಕಾರವು ಅಪೂರ್ವ ವೇಗದಲ್ಲಿ ಮಾದಕದ್ರವ್ಯ ಜಾಲಗಳನ್ನು ಭಗ್ನ್ರಗೊಳಿಸುತ್ತಿವೆ. ಭಾರತವನ್ನು ಮಾದಕಮುಕ್ತಗೊಳಿಸುವ ಪ್ರಧಾನಿ ಮೋದಿಜೀಯವರ ದೂರದೃಷ್ಟಿಯನ್ನು ಸಾಧಿಸಲು, ವಿವಿಧ ಏಜೆನ್ಸಿಗಳ ಸಮನ್ವಯದ ಕಾರ್ಯಾಚರಣೆಗೆ ಇದೊಂದು ಉಜ್ವಲ ನಿದರ್ಶನವಾಗಿದೆ. ಎನ್ಸಿಬಿ ಹಾಗೂ ದಿಲ್ಲಿ ಪೊಲೀಸರಿಗೆ ಜಂಟಿ ಅಭಿನಂದನೆಗಳು ’’ ಎಂದು ಹೇಳಿದ್ದಾರೆ.







