ಬಡವರ ಸಂಖ್ಯೆ ಹೆಚ್ಚುತ್ತಿದೆ, ಸಂಪತ್ತು ಕೆಲವೇ ಮಂದಿಯ ಪಾಲಾಗುತ್ತಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಳವಳ

Photo Credit: PTI
ಹೊಸದಿಲ್ಲಿ: ದೇಶದಲ್ಲಿ ಬಡವರ ಸಂಖ್ಯೆ ಏರಿಕೆಯಾಗುತ್ತಿದೆ ಯೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಕಳವಳ ವ್ಯಕ್ತಪಡಿಸಿದ್ದಾರೆ. ಕೇವಲ ಕೈಬೆರಳೆಣಿಕೆಯಷ್ಟು ಮಂದಿಯ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೃಷಿ, ಉತ್ಪಾದನಾವಲಯ, ತೆರಿಗೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಸೇರಿದಂತೆ ವಿವಿಧ ವಿಷಯಗಳನ್ನು ಅವರು ತನ್ನ ಭಾಷಣದಲ್ಲಿ ಪ್ರಸ್ತಾವಿಸಿದರು.
‘‘ಬಡವರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಾ ಹೋಗುತ್ತಿದೆ ಮತ್ತು ಸಂಪುತ್ತು ಕೆಲವೇ ಕೆಲವು ಶ್ರೀಮಂತ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ. ಹಾಗಾಗಬಾರದು’’ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರು ತಿಳಿಸಿದರು.
ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಗ್ರಾಮೀಣ ಪ್ರದೇಶಗಳನ್ನು ಮೇಲಕ್ಕೆತ್ತಲು ಸಹಾಯವಾಗುವಂತಹ ರೀತಿಯಲ್ಲಿ ದೇಶದ ಆರ್ಥಿಕತೆಯು ಬೆಳವಣಿಗೆಯಾಗಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರೂ ಆದ ನಿತಿನ್ ಗಡ್ಕರಿ ತಿಳಿಸಿದರು.
‘‘ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವಂತಹ ಆರ್ಥಿಕ ಆಯ್ಕೆಯನ್ನು ನಾವು ಹುಡುಕುತ್ತಿದ್ದೇವೆ. ಸಂಪತ್ತಿನ ವಿಕೇಂದ್ರೀಕರಣವಾಗುವ ಅಗತ್ಯವಿದೆ’’, ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಹಲವಾರು ಬದಲಾವಣೆಗಳು ಸಂಭವಿಸಿವೆ ಎಂದರು.
ಆರ್ಥಿಕ ಉದಾರೀಕರಣ ನೀತಿಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರಿಗೆ ಹಿರಿಯ ಬಿಜೆಪಿ ನಾಯಕರೂ ಆದ ಗಡ್ಕರಿ ಕೃತಜ್ಞತೆ ಅರ್ಪಿಸಿದರು.ಆದರೆ ಉದಾರೀಕರಣದ ಪರಿಣಾಮವಾಗಿ ಸಂಪತ್ತಿನ ಕೇಂದ್ರೀಕರಣವನ್ನು ನಿಯಂತ್ರಿಸದೇ ಇರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.
ಭಾರತದ ಆರ್ಥಿಕ ಸಂರಚನೆಯ ಬಗ್ಗೆ ಪ್ರಸ್ತಾವಿಸಿದ ಅವರು, ಜಿಡಿಪಿಗೆ ಕೊಡುಗೆ ನೀಡುವಲ್ಲಿ ವಿವಿಧ ವಲಯಗಳ ನಡುವೆ ಸಮತೋಲನ ಇಲ್ಲದೆ ಇರುವ ಬಗ್ಗೆಯೂ ಅವರು ಗಮನಸೆಳೆದರು.
‘‘ ಉತ್ಪಾದನಾ ವಲಯವು ಜಿಡಿಪಿಗೆ ಶೇ.22ರಿಂದ ಶೇ.24ರಷ್ಟು ಕೊಡುಗೆ ನೀಡುತ್ತದೆ, ಸೇವಾವಲಯವು ಶೇ.52ರಿಂದ ಶೇ.54ರವರೆಗೆ ಕೃಷಿಗೆ ಕೊಡುಗೆ ನೀಡುತ್ತದೆ. ಗ್ರಾಮೀಣ ಜನಸಂಖ್ಯೆಯ ಶೇ.65ರಿಂದ ಶೇ.70ರಷ್ಟು ಮಂದಿ ಕೃಷಿಯಲ್ಲಿ ತೊಡಗಿರುವ ಹೊರತಾಗಿಯೂ ಆ ವಲಯದ ಕೊಡುಗೆ ಕೇವಲ ಶೇ.12ರ ಆಸುಪಾಸಿನಲ್ಲಿದೆ’’ ಎಂದವರು ಹೇಳಿದರು.
ಹಸಿದವನಿಗೆ ತತ್ವಜ್ಞಾನವನ್ನು ಬೋಧಿಸಬಾರದೆಂಬ ವಿವೇಕಾನಂದರ ವಾಣಿಯನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ದೇಶದ ಪ್ರಗತಿಯಲ್ಲಿ ಲೆಕ್ಕ ಪರಿಶೋಧಕರ (ಚಾರ್ಟರ್ಡ್ ಅಟೌಂಟೆಂಟ್) ಮಹತ್ವದ ಪಾತ್ರವನ್ನು ವಿವರಿಸಿದ ಅವರು, ದೇಶದ ಆರ್ಥಿಕತೆಯ ಎಂಜಿನ್ಗಳ ಬೆಳವಣಿಗೆಗೆ ಸಿಎಗಳ ಪಾತ್ರವನ್ನು ವಿವರಿಸಿದರು. ನಮ್ಮ ಆರ್ಥಿಕತೆಯು ಕ್ಷಿಪ್ರ ಬದಲಾವಣೆಯನ್ನು ಕಾಣುತ್ತಿದೆ. ಅದು ಈಗ ಕೇವಲ ಆದಾಯ ತೆರಿಗೆ ರಿಟರ್ನ್ ಗಳುಹಾಗೂ ಜಿಎಸ್ಟಿ ಸಲ್ಲಿಕೆ ಮಾತ್ರವೇ ಆಗಿ ಉಳಿದಿಲ್ಲ ಎಂದರು.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಿಧಿಯ ಕೊರತೆಯಿಲ್ಲ. ಆದರೆ ಕೆಲಸದ ಕೊರತೆಯಿದೆ ಎಂದವರು ಹೇಳಿದರು.
ಪ್ರಸಕ್ತ ಮುಂದಿನ ಎರಡು ವರ್ಷಗಳಲ್ಲಿ ಟೋಲ್ ಗೇಟ್ ಗಳ ಮೂಲಕ ಸುಮಾರು 55 ಸಾವಿರ ಕೋಟಿ ರೂ. ಸಂಗ್ರಹವಾಗಲಿದೆ. ನಮ್ಮ ಆದಾಯವು 1.40 ಲಕ್ಷ ಕೋಟಿ ರೂ.ವರೆಗೆ ತಲುಪಲಿದೆ. ಮುಂದಿನ 15 ವರ್ಷಗಳವರೆಗೆ ಮುಂದುವರಿದಲ್ಲಿ 12 ಲಕ್ಷ ಕೋಟಿ ರೂ. ದೊರೆಯಲಿದೆ. ನೂತನ ಟೋಲ್ಗೇಟ್ಗಳು ನಮ್ಮ ಬೊಕ್ಕಸಕ್ಕೆ ಇನ್ನೂ ಹೆಚ್ಚಿನ ಹಣವನ್ನು ತಂದುಕೊಡಿದೆ’’ ಎಂದರು.