ಬಿಹಾರ ಜಾತಿಗಣತಿ ವರದಿ ಪ್ರಕಟ: ಜನಸಂಖ್ಯೆಯ ಶೇ.63ರಷ್ಟು ಒಬಿಸಿಗಳು, ಶೇ.16ರಷ್ಟು ಸಾಮಾನ್ಯ ವರ್ಗದವರು

ಸಾಂದರ್ಭಿಕ ಚಿತ್ರ (PTI)
ಪಾಟ್ನಾ: ಲೋಕಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿಯಿರುವಂತೆ ಸೋಮವಾರ ಬಿಹಾರ ಸರಕಾರವು ತನ್ನ ವಿವಾದಾತ್ಮಕ ಜಾತಿ ಆಧಾರಿತ ಗಣತಿಯ ಫಲಿತಾಂಶಗಳನ್ನು ಬಹಿರಂಗಗೊಳಿಸಿದೆ. ರಾಜ್ಯದ ಜನಸಂಖ್ಯೆಯ ಶೇ.63ರಷ್ಟು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಸೇರಿದ್ದಾರೆ ಎನ್ನುವುದನ್ನು ಜಾತಿಗಣತಿಯು ಬೆಳಕಿಗೆ ತಂದಿದೆ.
ರಾಜ್ಯದ 13 ಕೋಟಿ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳ ಪಾಲು ಶೇ.19ಕ್ಕಿಂತ ಕೊಂಚ ಹೆಚ್ಚಿದೆ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಶೇ.1.68ರಷ್ಟಿದ್ದಾರೆ. ಮೇಲ್ಜಾತಿಗಳು ಅಥವಾ ಸವರ್ಣೀಯರು ಶೇ.15.52ರಷ್ಟಿದ್ದಾರೆ.
ಹಿಂದುಳಿದ ವರ್ಗಗಳಿಗೆ ಸೇರಿದವರು ಜನಸಂಖ್ಯೆಯ ಶೇ.27ರಷ್ಟಿದ್ದರೆ ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿದವರ ಪ್ರಮಾಣ ಶೇ.36ರಷ್ಟಿದೆ. ಇವೆರಡೂ ವರ್ಗಗಳು ಒಟ್ಟಾಗಿ ಮಂಡಲ್ ಅಲೆಯ ಬಳಿಕ ಬಿಹಾರದ ರಾಜಕೀಯದಲ್ಲಿ ಪ್ರಾಬಲ್ಯವನ್ನು ಹೊಂದಿರುವ ಸಂಖ್ಯಾತ್ಮಕವಾಗಿ ಬಲಿಷ್ಠವಾಗಿರುವ ಇತರ ಹಿಂದುಳಿದ ವರ್ಗಗಳನ್ನು ರೂಪಿಸಿವೆ.
ಜನಸಂಖ್ಯೆಯ ಶೇ.2.86ರಷ್ಟು ಭೂಮಿಹಾರ್ಗಳು,ಶೇ.3.66ರಷ್ಟು ಬ್ರಾಹ್ಮಣರಿದ್ದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಅವರ ಕುರ್ಮಿ ಸಮುದಾಯದವರು ಶೆ.2.87ರಷ್ಟಿದ್ದಾರೆ. ಮುಸಾಹರ್ಗಳು ಶೇ.3ರಷ್ಟಿದ್ದರೆ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಯಾದವ್ ಸಮುದಾಯದವರು ಶೇ.14ರಷ್ಟಿದ್ದಾರೆ.
ಜಾತಿಗಣತಿ ಕುರಿತು ಕಾನೂನು ತೊಡಕುಗಳು ಮತ್ತು ಬಿಜೆಪಿಯ ವಿರೋಧವನ್ನು ಎದುರಿಸಿದ್ದ ನಿತೀಶ್, ಸಮೀಕ್ಷೆಯು ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯ ಬಗ್ಗೆಯೂ ಮಾಹಿತಿಯನ್ನು ಒದಗಿಸಿದೆ. ಎಲ್ಲ ವರ್ಗಗಳ ಅಭಿವೃದ್ಧಿ ಹಾಗೂ ಉನ್ನತಿಗಾಗಿ ರಾಜ್ಯ ಸರಕಾರದ ಉಪಕ್ರಮಗಳಿಗೆ ವರದಿಯು ನೆರವಾಗುತ್ತದೆ ಎಂದು X ಪೋಸ್ಟ್ನಲ್ಲಿ ಹೇಳಿದ್ದಾರೆ.
‘ಇಂದು ಗಾಂಧಿ ಜಯಂತಿಯಂದು ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಬಿಜೆಪಿಯ ಅನೇಕ ಪಿತೂರಿಗಳು ಮತ್ತು ಕಾನೂನು ತೊಡಕುಗಳ ಹೊರತಾಗಿಯೂ ಬಿಹಾರ ಸರಕಾರವು ಜಾತಿಗಣತಿ ವರದಿಯನ್ನು ಬಿಡುಗಡೆಗೊಳಿಸಿದೆ’ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರಕಾರದ ಪಾಲುದಾರ ಆರ್ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಟೀಟಿಸಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಜಾತಿಗಣತಿಯು ನಿರ್ಣಾಯಕವಾಗಿದೆ ಎಂದು ಬಿಹಾರ ಸರಕಾರವು ಪ್ರತಿಪಾದಿಸಿತ್ತು. ಸರ್ವೋಚ್ಚ ನ್ಯಾಯಾಲಯವು ಈ ಪ್ರಕ್ರಿಯೆಗೆ ತಡೆಯೊಡ್ಡದೆ ಸರಕಾರವು ತನ್ನ ಯೋಜನೆಯಂತೆ ಮುಂದುವರಿಯಲು ಅವಕಾಶವನ್ನು ಒದಗಿಸಿತ್ತು.