ಒಡಿಶಾ| ಫ್ಲ್ಯಾಟ್ ಮೇಲೆ ಅಧಿಕಾರಿಗಳ ದಾಳಿ ವೇಳೆ ಮಹಡಿಯ ಮೇಲಿಂದ 500 ರೂ. ನೋಟಿನ ಕಂತೆಗಳ ಸುರಿಮಳೆ ಸುರಿಸಿದ ಮುಖ್ಯ ಇಂಜಿನಿಯರ್!

PC : Vigilance , Odisha
ಭುವನೇಶ್ವರ (ಒರಿಸ್ಸಾ): ಒಡಿಶಾ ವಿಚಕ್ಷಣಾ ಇಲಾಖೆಯ ಸಿಬ್ಬಂದಿಗಳು ತನ್ನ ಫ್ಲ್ಯಾಟ್ ಮೇಲೆ ನಡೆಸಿದ ದಾಳಿಯಿಂದ ಪಾರಾಗಲು, ಒಡಿಶಾ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಒಬ್ಬರು ಮಹಡಿಯ ಮೇಲಿಂದ 500 ರೂ. ಮುಖಬೆಲೆಯ ನೋಟಿನ ಕಂತೆಗಳ ಸುರಿಮಳೆ ಸುರಿಸಿರುವ ಘಟನೆ ವರದಿಯಾಗಿದೆ.
ಒಡಿಶಾ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಬೈಕುಂಠ ನಾಥ್ ಸಾರಂಗಿಗೆ ಸಂಬಂಧಿಸಿದ ಏಳು ಸ್ಥಳಗಳ ಮೇಲೆ ದಾಳಿ ನಡೆಸಿದ ರಾಜ್ಯ ವಿಚಕ್ಷಣಾ ಇಲಾಖೆಯ ಸಿಬ್ಬಂದಿಗಳು, ಅವರಿಂದ ಸುಮಾರು 2.1 ಕೋಟಿ ರೂ. ಮೌಲ್ಯದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮುಖ್ಯ ಇಂಜಿನಿಯರ್ ಬೈಕುಂಠ ನಾಥ್ ಸಾರಂಗಿ ತಮ್ಮ ಆದಾಯ ಮೀರಿದ ಸಂಪತ್ತು ಹೊಂದಿದ್ದಾರೆ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.
ಈ ವೇಳೆ ನಾಟಕೀಯ ಘಟನೆಗಳು ನಡೆದಿದ್ದು, ವಿಚಕ್ಷಣಾ ಅಧಿಕಾರಿಗಳು ತನ್ನ ಫ್ಲ್ಯಾಟ್ಗೆ ಧಾವಿಸುತ್ತಿದ್ದಂತೆಯೇ, ತನ್ನ ಬಳಿಯಿದ್ದ 500 ರೂ. ಮುಖಬೆಲೆಯ ನೋಟಿನ ಕಂತೆಗಳನ್ನು ಕಿಟಕಿಯಿಂದ ಹೊರಹಾಕಲು ಸಾರಂಗಿ ಪ್ರಯತ್ನಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಟು ಮಂದಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 12 ಮಂದಿ ಇನ್ಸ್ಪೆಕ್ಟರ್ಗಳು ಹಾಗೂ ಆರು ಮಂದಿ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳು ತಂಡದಲ್ಲಿದ್ದರು.
ಅಂಗುಲ್ನ ವಿಚಕ್ಷಣಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಜಾರಿಗೊಳಿಸಿದ್ದ ವಾರಂಟ್ ಅನ್ನು ಆಧರಿಸಿ, ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಅಂಗುಲ್ನ ಕರಡಗಡಿಯದಲ್ಲಿನ ಎರಡು ಅಂತಸ್ತಿನ ಮನೆ, ಭುವನೇಶ್ವರದ ಡುಮ್ಡುಮ ಹಾಗೂ ಪುರಿಯ ಪಿಪಿಲಿಯಯಲ್ಲಿನ ಸಿಲುವದಲ್ಲಿನ ಒಂದು ಫ್ಲ್ಯಾಟ್ ಕೂಡಾ ಈ ಶೋಧ ಕಾರ್ಯಾಚರಣೆಯಲ್ಲಿ ಒಳಗೊಂಡಿದ್ದವು.
ಮುಟ್ಟುಗೋಲು ಹಾಕಿಕೊಳ್ಳಲಾದ 2.1 ಕೋಟಿ ರೂ. ನಗದಿನ ಪೈಕಿ, ಒಂದು ಕೋಟಿ ರೂ. ನಗದನ್ನು ಸಾರಂಗಿಯ ಭುವನೇಶ್ವರ ಫ್ಲ್ಯಾಟ್ನಿಂದ ವಶಪಡಿಸಿಕೊಂಡಿದ್ದರೆ, ಉಳಿದ 1.1 ಕೋಟಿ ರೂ. ನಗದನ್ನು ಅಂಗುಲ್ನಲ್ಲಿರುವ ಅವರ ನಿವಾಸದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಮೊತ್ತವನ್ನು ದೃಢಪಡಿಸಿಕೊಳ್ಳಲು ಅಧಿಕಾರಿಗಳು ನಗದು ಎಣಿಕೆ ಯಂತ್ರಗಳನ್ನು ಬಳಸಿದರು ಎಂದು ವರದಿಯಾಗಿದೆ.
ಈ ಸಂಬಂಧ ತನಿಖೆ ಮುಂದುವರಿದಿದ್ದು, ಮತ್ತಷ್ಟು ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.







