ಒಡಿಶಾ: ಯುವತಿಯ ಅತ್ಯಾಚಾರ ಆರೋಪ; NSUI ಅಧ್ಯಕ್ಷನ ಬಂಧನ

ಉದಿತ್ ಪ್ರಧಾನ್ | PC : NDTV
ಭುವನೇಶ್ವರ: ಭುವನೇಶ್ವರದಲ್ಲಿ 19 ವರ್ಷದ ಯುವತಿಯ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ನ ವಿದ್ಯಾರ್ಥಿ ಘಟಕದ ನಾಯಕನನ್ನು ಬಂಧಿಸಲಾಗಿದೆ.
ಯುವತಿಯ ದೂರಿನ ಆಧಾರದಲ್ಲಿ NSUIಯ ಒಡಿಶಾ ಘಟಕದ ಅಧ್ಯಕ್ಷ ಉದಿತ್ ಪ್ರಧಾನ್ ನನ್ನು ರವಿವಾರ ಬಂಧಿಸಲಾಗಿದೆ.
ಈ ಘಟನೆ ಮಾರ್ಚ್ 18ರಂದು ನಡೆದಿದೆ. ಆದರೆ, ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಯುವತಿ ಮಂಚೇಶ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಘಟನೆ ರವಿವಾರ ಬೆಳಕಿಗೆ ಬಂದಿದೆ.
ಉದಿತ್ ಪ್ರಧಾನ್ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿದ್ದಾನೆ. ನಗರದಲ್ಲಿರುವ ಹೊಟೇಲ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಉದಿತ್ ಪ್ರಧಾನ್ ಬೆದರಿಕೆ ಒಡ್ಡಿದ್ದಾನೆ ಎಂದು ಕೂಡ ಯುವತಿ ಆರೋಪಿಸಿದ್ದಾರೆ.
‘‘ಉದಿತ್ ಪ್ರಧಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅತ್ಯಾಚಾರ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ನಡುವೆ NSUIಯ ರಾಷ್ಟ್ರಾಧ್ಯಕ್ಷ ವರುಣ್ ಚೌಧರಿ ಹೇಳಿಕೆ ಬಿಡುಗಡೆ ಮಾಡಿ, ಉದಿತ್ ಪ್ರಧಾನ್ ನನ್ನು NSUIಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.







