Odisha: ವಲಸೆ ಕಾರ್ಮಿಕನ ಥಳಿಸಿ ಹತ್ಯೆ; ಬಾಂಗ್ಲಾದೇಶದ ವಲಸಿಗ ಎಂದು ಆರೋಪ

ಸಾಂದರ್ಭಿಕ ಚಿತ್ರ
ಭುವನೇಶ್ವರ, ಡಿ. 25: ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರೊಬ್ಬರನ್ನು ಬಾಂಗ್ಲಾದೇಶದ ಅಕ್ರಮ ವಲಸಿಗ ಎಂದು ಆರೋಪಿಸಿ ಅಪರಿಚಿತ ದಾಳಿಕೋರರ ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಸಂಭಾಲ್ಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತಪಟ್ಟ ವಲಸೆ ಕಾರ್ಮಿಕನನ್ನು ಜುಯೆಲ್ ಶೇಖ್ (30) ಎಂದು ಗುರುತಿಸಲಾಗಿದೆ.
ಸಂಬಾಲ್ಪುರದ ಶಾಂತಿ ನಗರದಲ್ಲಿರುವ ಚಹಾದ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ದಿನದ ಕೆಲಸ ಮುಗಿಸಿ ಇತರ ಮೂವರು ವಲಸೆ ಕಾರ್ಮಿಕರೊಂದಿಗೆ ಹಿಂದಿರುಗುತ್ತಿದ್ದ ಶೇಖ್ ಚಹಾದ ಅಂಗಡಿಯಲ್ಲಿ ಸ್ವಲ್ಪ ಕಾಲ ನಿಂತಿದ್ದರು.
ಈ ಸಂದರ್ಭ ಚಹಾದ ಅಂಗಡಿಗೆ 4ರಿಂದ 5 ಜನರಿದ್ದ ಗುಂಪೊಂದು ಆಗಮಿಸಿತು ಹಾಗೂ ಅವರನ್ನು ಪ್ರಶ್ನಿಸಿತು. ಅವರನ್ನು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಆರೋಪಿಸಿತು. ಆಕ್ರಮಣಕಾರರು ಶೇಖ್ ಹಾಗೂ ಇತರರಲ್ಲಿ ಗುರುತಿನ ದಾಖಲೆ ಕೇಳಿದರು.
ಶೇಖ್ ಹಾಗೂ ಇತರರು ಗುರುತಿನ ದಾಖಲೆಗಳನ್ನು ನೀಡಿದ ಹೊರತಾಗಿಯೂ ದಾಳಿಕೋರರು ಅವರಿಗೆ ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಮೂವರು ಪರಾರಿಯಾಗುವುದರಲ್ಲಿ ಯಶಸ್ವಿಯಾದರು. ಆದರೆ, ದಾಳಿಕೋರರು ಶೇಖ್ ನನ್ನು ಹಿಡಿದು ಬರ್ಬರವಾಗಿ ಥಳಿಸಿದರು. ಗಂಭೀರ ಗಾಯಗೊಂಡ ಶೇಖ್ ಸ್ಥಳದಲ್ಲೇ ಮೃತಪಟ್ಟರು. ಅನಂತರ ದಾಳಿಕೋರರು ಪರಾರಿಯಾದರು ಎಂದು ಅವರು ಹೇಳಿದ್ದಾರೆ.
ಮಾಹಿತಿ ತಿಳಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದರು ಹಾಗೂ ಮೃತದೇಹವನ್ನು ವಶಕ್ಕೆ ತೆಗೆದುಕೊಂಡರು. ಗಾಯಗೊಂಡ ಇತರ ವಲಸೆ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಕೋರರನ್ನು ಗುರುತಿಸಲು ಹಾಗೂ ಪತ್ತೆ ಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ.







