ಒಡಿಶಾ | ಇಬ್ಬರು ಸೋದರರಿಂದ ಹದಿಹರೆಯದ ಬಾಲಕಿಯ ಅತ್ಯಾಚಾರ, ಗರ್ಭಿಣಿಯಾದಾಗ ಜೀವಂತವಾಗಿ ಹೂಳಲು ಯತ್ನ

Photo | NDTV
ಭುವನೇಶ್ವರ: ಸೋದರರಿಬ್ಬರು 15ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು,ಆಕೆ ಐದು ತಿಂಗಳ ಗರ್ಭಿಣಿಯಾದಾಗ ಆಕೆಯನ್ನು ಜೀವಂತ ಹೂಳಲು ಯತ್ನಿಸಿದ ಘಟನೆ ಒಡಿಶಾದ ಜಗತ್ಸಿಂಗಪುರ ಜಿಲ್ಲೆಯಲ್ಲಿ ನಡೆದಿದೆ.
ಬನಶಬಾರಾ ಗ್ರಾಮದ ಆರೋಪಿ ಸೋದರರಾದ ಭಾಗ್ಯಧರ ದಾಸ್ ಮತ್ತು ಪಂಚಾನನ್ ದಾಸ್ ಎನ್ನುವವರನ್ನು ಪೋಲಿಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮೂರನೇ ಶಂಕಿತ ಆರೋಪಿ ತುಳು ಎಂಬಾತನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪೋಲಿಸರ ಪ್ರಕಾರ ಆರೋಪಿಗಳು ತಿಂಗಳುಗಳ ಕಾಲ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದರು. ಆಕೆ ಗರ್ಭಿಣಿಯಾಗಿದ್ದು ಗೊತ್ತಾದಾಗ ತಮ್ಮ ಅಪರಾಧವನ್ನು ಮುಚ್ಚಿಹಾಕಲು ಆಕೆಯನ್ನು ಜೀವಂತವಾಗಿ ಹೂಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಬಾಲಕಿಗೆ ಹಣ ನೀಡುವುದಾಗಿ ಮತ್ತು ಗರ್ಭಪಾತಕ್ಕೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದ ಆರೋಪಿಗಳು ಆಕೆಯನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡಿದ್ದರು. ಬಾಲಕಿ ಸ್ಥಳವನ್ನು ತಲುಪಿದಾಗ ಅಲ್ಲಿ ಹೊಂಡವೊಂದನ್ನು ತೋಡಿದ್ದನ್ನು ಗಮನಿಸಿದ್ದಳು. ಗರ್ಭಪಾತ ಮಾಡಿಸಿಕೊಳ್ಳದಿದ್ದರೆ ಜೀವಂತವಾಗಿ ಹೊಂಡದಲ್ಲಿ ಹೂತು ಹಾಕುವುದಾಗಿ ಆರೋಪಿಗಳು ಆಕೆಗೆ ಬೆದರಿಕೆಯೊಡ್ಡಿದ್ದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಆರೋಪಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಬಾಲಕಿ ತಂದೆಯ ಬಳಿ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಳು. ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ.







