ಒಡಿಶಾ | ಸುಟ್ಟ ಗಾಯದ ಸಂತ್ರಸ್ತೆಯ ಪರಿಸ್ಥಿತಿ ಗಂಭೀರ; ಆಮ್ಲಜನಕದ ನೆರವಿನಲ್ಲಿದ್ದಾರೆ: ದಿಲ್ಲಿ ಏಮ್ಸ್

Photo Credit: PTI
ಹೊಸದಿಲ್ಲಿ: ಒಡಿಶಾದ ಪುರಿ ಜಿಲ್ಲೆಯಲ್ಲಿ ಮೂವರು ಯುವಕರಿಂದ ಬೆಂಕಿ ಸ್ಪರ್ಶಕ್ಕೆ ಒಳಗಾಗಿದ್ದ 15 ವರ್ಷದ ಬಾಲಕಿಯ ಪರಿಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ರವಿವಾರ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇ. 75ರಷ್ಟು ಸುಟ್ಟ ಗಾಯಗಳಿಗೀಡಾಗಿರುವ ಬಾಲಕಿಯು ರವಿವಾರ ಸಂಜೆ 4.20ಕ್ಕೆ ದಿಲ್ಲಿಯ ಏಮ್ಸ್ ಗೆ ಏರ್ ಲಿಫ್ಟ್ ಮೂಲಕ ತಲುಪಿದಳು ಎಂದು ಏಮ್ಸ್ ಆಸ್ಪತ್ರೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟನೆಯಲ್ಲಿ ಹೇಳಲಾಗಿದೆ.
“ಆಕೆಯನ್ನು ಸದ್ಯ ಸುಟ್ಟ ಗಾಯ ಹಾಗೂ ಸುರೂಪ ಚಿಕಿತ್ಸೆ ವಿಭಾಗದ ತೀವ್ರ ನಿಗಾ ಘಟಕಕ್ಕೆ ಸೇರ್ಪಡೆ ಮಾಡಲಾಗಿದೆ. ಆಕೆಯ ಪರಿಸ್ಥಿತಿ ಗಂಭೀರವಾಗಿದ್ದು, ಆಕೆಯೀಗ ಆಮ್ಲಜನಕದ ನೆರವಿನೊಂದಿಗೆ ಉಸಿರಾಡುತ್ತಿದ್ದಾಳೆ. ಆಕೆಯ ದೈಹಿಕ ಆರೋಗ್ಯ ಪರಿಸ್ಥಿತಿಯ ಮೇಲೆ ವೈದ್ಯರ ತಂಡವೊಂದು ನಿಕಟವಾಗಿ ನಿಗಾ ವಹಿಸಿದೆ” ಎಂದು ಈ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ನಡುವೆ, ಶನಿವಾರ ಪುರಿಯ ಬಲಂಗಾ ಪ್ರದೇಶದಲ್ಲಿ ನಡೆದ ಘಟನೆಯ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಝಿ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.





