2006ರಿಂದ 582 ಮಾವೋವಾದಿಗಳು ಶರಣಾಗತ: ಒಡಿಶಾ ಸಿಎಂ

ಮೋಹನ್ ಚರಣ್ ಮಾಝಿ | PTI
ಭುವನೇಶ್ವರ: 2006ರಿಂದ 2025 ಜನವರಿ ವರೆಗೆ ಒಡಿಶಾದಲ್ಲಿ ಒಟ್ಟು 582 ಮಾವೋವಾದಿ (ಸಿಪಿಐ)ಗಳು ಶರಣಾಗತರಾಗಿದ್ದಾರೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೋಮವಾರ ರಾಜ್ಯ ವಿಧಾನ ಸಭೆಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಮಂಗು ಖಿಲ್ಲಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಶರಣಾಗತರಾದ 582 ಮಾವೋವಾದಿಗಳ ಪೈಕಿ ಅರ್ಹ 364 ಮಂದಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದಕ್ಕೆ ಸಂಬಂಧಿಸಿ ಒಟ್ಟು 9.62 ಕೋ.ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಾವೋ (ಸಿಪಿಐ)ವಾದಿ ಸಂಘಟನೆಗಳಿಗೆ ಸೇರಿದ ಹಾಗೂ ರಾಜ್ಯ, ಆಡಳಿತದೊಂದಿಗೆ ಶಸ್ತ್ರಾಸ್ತ್ರ ಸಂಘರ್ಷದಲ್ಲಿ ಭಾಗಿಯಾದ ಮಾವೋವಾದಿಗಳನ್ನು ಮತ್ತೆ ಮುಖ್ಯ ವಾಹಿನಿಗೆ ತರಲು 2006ರಿಂದ ರಾಜ್ಯದಲ್ಲಿ ರಾಜ್ಯ ಸರಕಾರ ‘ಶರಣಾಗತಿ ಹಾಗೂ ಪುನರ್ವಸತಿ ನೀತಿ’ಯನ್ನು ಅನುಷ್ಠಾನಗೊಳಿಸುತ್ತಿದೆ.
ನೀತಿಯ ಅರ್ಹ ಮಾನದಂಡಕ್ಕೆ ಅನುಗುಣವಾಗಿ ಶರಣಾಗತ ಮಾವೋವಾದಿಗಳಿಗೆ ವಿವಿಧ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ ಎಂದು ಮಾಝಿ ತಿಳಿಸಿದ್ದಾರೆ.
ಈ ನೀತಿಯ ಅಡಿಯಲ್ಲಿ ರಾಜ್ಯ ಸರಕಾರ 2.50 ಲಕ್ಷ ರೂ. ವರೆಗೆ ಹಣಕಾಸು ನೆರವು, ನಿವೇಶನಕ್ಕೆ 25 ಸಾವಿರ ರೂ. ನೆರವು ಹಾಗೂ ಮನೆ ನಿರ್ಮಾಣಕ್ಕೆ 45 ಸಾವಿರ ನೆರವು ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.





