ಸ್ವಯಂಸೇವಕರಾಗಿ ನಾಗರಿಕ ರಕ್ಷಣಾ ಘಟಕಗಳನ್ನು ಸೇರುವಂತೆ ಯುವಜನರಿಗೆ ಒಡಿಶಾ ಸಿಎಂ ಮನವಿ

ಒಡಿಶಾ ಮುಖ್ಯಮಂತ್ರಿ ಚರಣ ಮಾಝಿ - Photo : PTI
ಭುವನೇಶ್ವರ: ದೇಶಕ್ಕೆ ಸೇವೆ ಸಲ್ಲಿಸಲು ಸ್ವಯಂಸೇವಕರಾಗಿ ನಾಗರಿಕ ರಕ್ಷಣಾ ಸಂಸ್ಥೆಗಳನ್ನು ಸೇರುವಂತೆ ಒಡಿಶಾ ಮುಖ್ಯಮಂತ್ರಿ ಚರಣ ಮಾಝಿ ಅವರು ರವಿವಾರ ಯುವಜನರಿಗೆ ಮನವಿ ಮಾಡಿದ್ದಾರೆ.
ಯುವಜನರು ದೇಶದ ಭರವಸೆ,ಶಕ್ತಿ ಮತ್ತು ವಿಶ್ವಾಸವನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದ ಮಾಝಿ, ರಾಷ್ಟ್ರೀಯತೆಯ ಮನೋಭಾವದೊಂದಿಗೆ ನಾಗರಿಕ ರಕ್ಷಣಾ ಸಂಸ್ಥೆಗಳಿಗೆ ಸೇರಲು ಮುಂದಾಗುವಂತೆ ಅವರನ್ನು ಆಗ್ರಹಿಸಿದರು.
‘ದೇಶದ ಸಾಮಾನ್ಯ ಜನರ ಜೀವಗಳು ಮತ್ತು ಆಸ್ತಿಗಳ ಭದ್ರತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭದ್ರತೆ ಮತ್ತು ಸೇವೆ ನಮ್ಮ ಪ್ರಮುಖ ಹೊಣೆಗಾರಿಕೆಗಳಾಗಿವೆ. ಆದ್ದರಿಂದ ನಾಗರಿಕ ರಕ್ಷಣಾ ಸಂಸ್ಥೆಗಳಿಗೆ ಸ್ವಯಂಸೇವಕರಾಗಿ ಸೇರುವಂತೆ ಎಲ್ಲ ಜನರನ್ನು,ವಿಶೇಷವಾಗಿ ಯುವಜನರನ್ನು ನಾನು ಕೇಳಿಕೊಳ್ಳುತ್ತೇನೆ’ ಎಂದು ಹೇಳಿದರು.
ಆಸಕ್ತ ಯುವಜನರು ನಾಗರಿಕ ರಕ್ಷಣಾ ಸಂಸ್ಥೆಗಳನ್ನು ಸೇರಲು ಜಿಲ್ಲಾ ಮಟ್ಟದಲ್ಲಿ ನಾಗರಿಕ ರಕ್ಷಣೆಯ ನಿಯಂತ್ರಕರಾಗಿರುವ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಸ್ವಯಂಸೇವಕರಿಗೆ ತರಬೇತಿ ನೀಡಲಾಗುವುದು ಮತ್ತು ಅಗತ್ಯವಿದ್ದರೆ ರಾಷ್ಟ್ರೀಯತೆಯ ಮನೋಭಾವದೊಂದಿಗೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಅವರನ್ನು ಸಜ್ಜುಗೊಳಿಸಲಾಗುವುದು ಎಂದು ಮಾಝಿ ತಿಳಿಸಿದರು.
ಪ್ರಸ್ತುತ ರಾಜ್ಯದ 12 ಸ್ಥಳಗಳಲ್ಲಿ ನಾಗರಿಕ ರಕ್ಷಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅಗತ್ಯಕ್ಕೆ ಅನುಗುಣವಾಗಿ ಇಂತಹ ಹೊಸ ಘಟಕಗಳನ್ನು ಸ್ಥಾಪಿಸುವಂತೆ ತಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.







