Odisha| ಕೆಐಐಟಿ ವಿದ್ಯಾರ್ಥಿ ಆತ್ಮಹತ್ಯೆ; ವರ್ಷದಲ್ಲಿ ಮೂರನೇ ಪ್ರಕರಣ

ಭುವನೇಶ್ವರ: ಸ್ವಾಯತ್ತ ವಿಶ್ವವಿದ್ಯಾನಿಲಯವಾಗಲು ಪರಿಗಣಿತ ಕೆಐಐಟಿಯ ಕಂಪ್ಯೂಟರ್ ಸೈನ್ಸ್ ಪದವಿ ವಿದ್ಯಾರ್ಥಿಯ ಶವ ಭಾನುವಾರ ರಾತ್ರಿ ಕ್ಯಾಂಪಸ್ ನ ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆಯಾಗಿದೆ. 18 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಇನ್ಫೋಸಿಟಿ ಪೊಲೀಸರು ಶಂಕಿಸಿದ್ದಾರೆ.
ಇದು ಈ ವರ್ಷ ಕ್ಯಾಂಪಸ್ ನಲ್ಲಿ ನಡೆದ ಮೂರನೇ ಪ್ರಕರಣವಾಗಿದ್ದು, ಫೆಬ್ರುವರಿ 16 ಮತ್ತು ಮೇ 1ರಂದು ಇಬ್ಬರು ನೇಪಾಳಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ನೇಪಾಳ ಸರ್ಕಾರದ ರಾಜತಾಂತ್ರಿಕ ಹಸ್ತಕ್ಷೇಪಕ್ಕೆ ಕಾರಣವಾಗಿತ್ತು.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ತಾಯಿ ರಾಯಪುರದವರಾಗಿದ್ದು, ಇನ್ಫೋಸಿಟಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗನ ಆತ್ಮಹತ್ಯೆಗೆ ಛತ್ತೀಸ್ಗಢದ ಯುವತಿ ಹಾಗೂ ಆಕೆಯ ಕುಟುಂಬದವರು ಕಾರಣ ಎಂದು ಆಪಾದಿಸಿದ್ದಾರೆ. ಮೊದಲ ವರ್ಷದ ವಿದ್ಯಾರ್ಥಿಗೆ ಈ ಯುವತಿ ಹಾಗೂ ಆಕೆಯ ಕುಟುಂಬದವರು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. "ಹಾಸ್ಟೆಲ್ ವಿದ್ಯಾರ್ಥಿಗಳ ಸಾಕ್ಷಿ, ಸಾಮಾಜಿಕ ಜಾಲತಾಣ ಖಾತೆಗಳ ವಿಶ್ಲೇಷಣೆ, ಡಿಜಿಟಲ್ ಸಂವಹನ ಮತ್ತು ಮೃತ ವಿದ್ಯಾರ್ಥಿಯ ತಾಯಿ ಹಾಗೂ ಸಂಬಂಧಿಕರು ನೀಡಿದ ಮಾಹಿತಿಯ ಆಧಾರದಲ್ಲಿ ಮಹಾರಾಷ್ಟ್ರದಲ್ಲಿ ಓದುತ್ತಿರುವ ಛತ್ತೀಸ್ಗಢದ ಯುವತಿ ಜತೆ ಈ ವಿದ್ಯಾರ್ಥಿ ಸ್ನೇಹಸಂಬಂಧ ಹೊಂದಿದ್ದ ಎನ್ನುವುದು ದೃಢಪಟ್ಟಿದೆ. ಈ ಆಧಾರದಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸರು ಹೇಳಿದ್ದಾರೆ.
"ಮೃತ ವಿದ್ಯಾರ್ಥಿಯ ತಾಯಿಯ ಹೇಳಿಕೆ ಪ್ರಕಾರ, ವಿದ್ಯಾರ್ಥಿ ಯುವತಿಯ ಜತೆ ವೈಯಕ್ತಿಕ ಸಂಬಂಧ ಹೊಂದಿದ್ದು, ಇದರ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಡಿಶಾದ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಆತ್ಮಹತ್ಯೆಗಳು ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿ. ಇದು ನಾವೆಲ್ಲರೂ ಎದುರಿಸಬೇಕಾದ ದೊಡ್ಡ ಸವಾಲು" ಎಂದು ಕೆಐಐಟಿ ಪ್ರಕಟಣೆ ಹೇಳಿದೆ. ಈ ಸಾವಿನಿಂದ ಕೆಐಐಟಿ ಅಧಿಕಾರವರ್ಗಕ್ಕೆ ತೀರಾ ಬೇಸರವಾಗಿದೆ. ತನಿಖೆಯಲ್ಲಿ ಪೊಲೀಸರಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಕೆಐಐಟಿ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕರಾದ ಶ್ರದ್ಧಂಜಲಿ ನಾಯಕ್ ಹೇಳಿದ್ದಾರೆ.







