ಕೆಐಎಸ್ಎಸ್ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣಕ್ಕೆ ತಿರುವು; ಸಹಪಾಠಿಗಳಿಂದಲೇ ಹತ್ಯೆ!

ಸಾಂದರ್ಭಿಕ ಚಿತ್ರ
ಭುವನೇಶ್ವರ: ಇಲ್ಲಿನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಕೆಐಎಸ್ಎಸ್)ನಲ್ಲಿ ಕಳೆದ ವಾರ ಸಂಭವಿಸಿದ 9ನೇ ತರಗತಿ ವಿದ್ಯಾರ್ಥಿಯ ನಿಗೂಢ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿ ಸ್ನಾನಗೃಹದಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾನೆ ಎಂದು ಸಂಸ್ಥೆಯ ಅಧಿಕಾರಿಗಳು ನೀಡಿದ ಹೇಳಿಕೆಗೆ ವಿರುದ್ಧವಾಗಿ, ಆತ ಸಹಪಾಠಿಗಳಿಂದಲೇ ಹತ್ಯೆಗೀಡಾಗಿರುವ ಅಂಶ ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ಕೆಐಎಸ್ಎಸ್ನಲ್ಲಿ ಓದುತ್ತಿದ್ದ ಕೊಯೆಂಜಾರ್ ಜಿಲ್ಲೆಯ ತಿಕರ್ಗುಮುರಾ ಗ್ರಾಮದ 14 ವರ್ಷದ ಸಿಬಾ ಮುಂಡಾ ಡಿಸೆಂಬರ್ 12ರಂದು ಭುವನೇಶ್ವರದ ಕೆಐಎಂಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ವಿದ್ಯಾರ್ಥಿಯ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿ, ವಸತಿಶಾಲೆಯ ಅಧಿಕಾರಿಗಳು ಸತ್ಯಾಂಶವನ್ನು ಮುಚ್ಚಿಟ್ಟಿದ್ದಾರೆ ಹಾಗೂ ವೈದ್ಯಕೀಯ ವರದಿಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ಆಪಾದಿಸಿದ್ದರು.
ಶುಕ್ರವಾರ ಬಾಲಕನ ಕುಟುಂಬವನ್ನು ಸಂಪರ್ಕಿಸಿದ ಕೆಐಎಸ್ಎಸ್ ಅಧಿಕಾರಿಗಳು, ಅಸ್ವಸ್ಥಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದರು ಎಂದು ಹುಡುಗನ ತಂದೆ ರಘುನಾಥ್ ಮುಂಡಾ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಇನ್ಫೋಸಿಟಿ ಠಾಣೆಯ ಅಧಿಕಾರಿಗಳು, "ಬೇಳೆಕಾಳು ವಿಚಾರದಲ್ಲಿ ಜಗಳವಾಡಿ ಬಾಲಕನನ್ನು ಸ್ನಾನಗೃಹದ ಒಳಗೆ ಹೊಡೆದು ಉಸಿರುಗಟ್ಟಿಸಿ ಮೂವರು ಸಹಪಾಠಿಗಳು ಹತ್ಯೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಕೆಐಎಸ್ಎಸ್ ಅಧಿಕಾರಿಗಳು ಹೇಳಿದಂತೆ ಆಕಸ್ಮಿಕವಾಗಿ ಬಿದ್ದು ವಿದ್ಯಾರ್ಥಿ ಮೃತಪಟ್ಟಿಲ್ಲ ಎನ್ನುವುದನ್ನು ಮರಣೋತ್ತರ ಪರೀಕ್ಷೆ ದೃಢಪಡಿಸುತ್ತದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತನಿಖಾಧಿಕಾರಿ ಹೇಳಿದ್ದಾರೆ.
ಪ್ರಕರಣದಲ್ಲಿ ಎಲ್ಲ ಮೂವರು ಆರೋಪಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಖುರ್ದಾ ಜಿಲ್ಲೆಯ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಸುಧಾರಣಾಗೃಹಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಕೆಐಎಸ್ಎಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಸಂಸ್ಥೆಯ ಹೆಚ್ಚುವರಿ ಸಿಇಓ ಪ್ರಮೋದ್ ಪಾತ್ರಾ ಹಾಗೂ ಹಲವು ಮಂದಿ ಶಿಕ್ಷಕರು ಸೇರಿದಂತೆ ಎಂಟು ಮಂದಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಭುವನೇಶ್ವರ ಪೊಲೀಸ್ ಆಯುಕ್ತ ಸುರೇಶ್ ದೇವದತ್ ಸಿಂಗ್ ಹೇಳಿದ್ದಾರೆ. ಅಪ್ರಾಪ್ತ ವಯಸ್ಸಿನ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಪುರಾವೆಗಳನ್ನು ನಾಶಪಡಿಸಲು ಪ್ರಯತ್ನಿಸಿದ ಆರೋಪ ಇವರ ಮೇಲಿದೆ.







