ಒಡಿಶಾ | ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರ: ಅಪ್ರಾಪ್ತ ಸಹಿತ ಮೂವರ ಬಂಧನ

ಸಾಂದರ್ಭಿಕ ಚಿತ್ರ (PTI)
ಬಾರಿಪದ (ಒಡಿಶಾ), ಆ. 7: ಬುಡಕಟ್ಟು ಸಮುದಾಯಕ್ಕೆ ಸೇರಿದ 11 ವರ್ಷದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಘಟನೆ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಪ್ರಾಪ್ತನ ಸಹಿತ ಮೂವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಓರ್ವ ಬಾಲಕಿಯ ಭಾವ ಎಂದು ಗುರುತಿಸಲಾಗಿದೆ ಅವರು ತಿಳಿಸಿದ್ದಾರೆ.
ಜೂನ್ 14 ಹಾಗೂ ಜುಲೈ 27ರ ನಡುವೆ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಬಾಲಕಿಯ ತಾಯಿ ಖುಂತಾ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 3ರಂದು ಎಫ್ಐಆರ್ ದಾಖಲಿಸಿದ ಬಳಿಕ ಈ ಬಂಧನ ನಡೆದಿದೆ.
ಅಪ್ರಾಪ್ತನನ್ನು ರೂರ್ಕೆಲಾದಲ್ಲಿರುವ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಇತರ ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
‘‘ಬಾಲಕಿ ಹಾಗೂ ಆರೋಪಿಗಳ ವೈದ್ಯಕೀಯ ಪರೀಕ್ಷೆಯನ್ನು ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಬಾಲಕಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಅವರ ಉಪಸ್ಥಿತಿಯಲ್ಲಿ ದಾಖಲಿಸಿಕೊಳ್ಳಲಾಗಿದೆ’’ ಎಂದು ಖುಂತಾ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ ಪಂಚನಾನ್ ಮೊಹಾಂತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.







