ಪರಿಶಿಷ್ಟ ಪಂಗಡದ ಸದಸ್ಯರನ್ನು ಬಲವಂತವಾಗಿ ನೆಲದಲ್ಲೇ ಕುಳ್ಳಿರಿಸಿದ ಅಧಿಕಾರಿಗಳು; ಪ್ರತಿಭಟನೆ
ಪುದುಚೇರಿ : ಬುಡಕಟ್ಟು ಜನರ ದಿನಾಚರಣೆ ಕಾರ್ಯಕ್ರಮದಲ್ಲಿ ಗದ್ದಲ
ಹೊಸದಿಲ್ಲಿ: ‘ಜನಜಾತೀಯ ಗೌರವ ದಿವಸ್’ ಅಂಗವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಬುಧವಾರ ಪುದುಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಡ ಸದಸ್ಯರ ಒಂದು ಗುಂಪಿನವರನ್ನು ನೆಲದಲ್ಲಿ ಬಲವಂತವಾಗಿ ಕುಳ್ಳಿರಿಸಿದ್ದು, ಗದ್ದಲಕ್ಕೆ ಕಾರಣವಾಯಿತು.
ಪುದುಚೇರಿಯ ಮುಖ್ಯಮಂತ್ರಿ ರಂಗಸ್ವಾಮಿ ಹಾಗೂ ಲೆ.ಗವರ್ನರ್ ತಮಿಳಿಸೈ ಸೌಂದರರಾಜನ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕೇವಲ 300 ಮಂದಿಯ ಆಸನ ಸಾಮರ್ಥ್ಯದ ಈ ಸಭಾಭವನದಲ್ಲಿ ಸರಕಾರಿ ಅಧಿಕಾರಿಗಳೇ ತುಂಬಿದ್ದರು. ಇದರಿಂದಾಗಿ ಸುಮಾರು 50 ಮಂದಿ ಪರಿಶಿಷ್ಟ ಪಂಗಡಗಳ ಸದಸ್ಯರಿಗೆ ಕುಳಿತುಕೊಳ್ಳಲು ಆಸನಗಳೇ ದೊರೆಯಲಿಲ್ಲ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ರಾಜ್ಯಪಾಲೆ ತಮಿಳಿಸೈ ಸುಂದರರಾಜನ್ ಹಾಗೂ ಮುಖ್ಯಮಂತ್ರಿ ರಂಗಸ್ವಾಮಿ ಅವರು ಬುಡಕಟ್ಟು ಪಂಗಡಗಳ ಸದಸ್ಯರಿಗೆ ಆಸನಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಸುಮಾರು 15 ನಿಮಿಷಗಳ ಗದ್ದಲದ ಬಳಿಕ, ಕಾರ್ಯಕ್ರಮ ಪುನಾರಂಭಗೊಂಡಿತು.
ಈ ಮಧ್ಯೆ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಡಿಸಿರುವ ರಾಜ್ಯಪಾಲೆ ತಮಿಳಿಸೈ ಅವರ ಕಾರ್ಯಾಲಯವು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ. ಈ ಬಗ್ಗೆ ವಿವರಣೆ ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕೂಡಾ ಜಾರಿಗೊಳಿಸಿರುವುದಾಗಿ ಅದು ತಿಳಿಸಿದೆ.







