ಒಐಸಿ ಹೇಳಿಕೆ ‘‘ಅನಗತ್ಯ’’, ‘‘ವಾಸ್ತವಿಕವಾಗಿ ಅಸತ್ಯ’’: ಭಾರತ ಹೇಳಿಕೆ

OIC - Photo : LinkedIn
ಹೊಸದಿಲ್ಲಿ: ತನ್ನ ಬಗ್ಗೆ ‘‘ಅನಗತ್ಯ’’ ಮತ್ತು ‘‘ವಾಸ್ತವಿಕವಾಗಿ ಸತ್ಯವಲ್ಲದ’’ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ಭಾರತವು ಸೋಮವಾರ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯನ್ನು ಟೀಕಿಸಿದೆ.
ಅದರ ಹೇಳಿಕೆಯು, ‘‘ಭಯೋತ್ಪಾದನೆಯನ್ನು ಸರಕಾರದ ಭಾಗವಾಗಿ ಪರವರ್ತಿಸಿಕೊಂಡಿರುವ’’ ಪಾಕಿಸ್ತಾನದಿಂದ ಪ್ರಭಾವಿತವಾಗಿದೆ ಎಂದು ಅದು ಹೇಳಿದೆ.
ತುರ್ಕಿಯದಲ್ಲಿ ನಡೆದ ಒಐಸಿಯ ಎರಡು ದಿನಗಳ ವಿದೇಶ ಸಚಿವರ ಸಮ್ಮೇಳನವು, ‘‘ಭಾರತೀಯ ಮುಸ್ಲಿಮರನ್ನು ಸಮಾಜದ ಅಂಚಿಗೆ ತಳ್ಳಲಾಗುತ್ತಿದೆ’’ ಎನ್ನುವುದು ಸೇರಿದಂತೆ ಹಲವು ವಿಷಯಗಳಲ್ಲಿ ಭಾರತವನ್ನು ಟೀಕಿಸಿದೆ. ಅದಕ್ಕೆ ಭಾರತವು ಕಟುವಾದ ಪ್ರತಿಕ್ರಿಯೆಯನ್ನು ನೀಡಿದೆ.
ಸಿಂಧೂ ನದಿ ನೀರು ಒಪ್ಪಂದ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂಬುದಾಗಿಯೂ ಒಐಸಿ ಕರೆ ನೀಡಿದೆ. ಉಭಯ ದೇಶಗಳ ನಡುವಿನ ಎಲ್ಲಾ ವಿವಾದಗಳ ಶಾಂತಿಯುತ ಪರಿಹಾರಕ್ಕಾಗಿ ವಿಶಾಲ ವ್ಯಾಪ್ತಿಯ ಮಾತುಕತೆಯ ಅಗತ್ಯವನ್ನೂ ಅದು ಪ್ರತಿಪಾದಿಸಿದೆ.
‘‘ಒಐಸಿ ವಿದೇಶ ಸಚಿವರ ಸಮ್ಮೇಳನದಲ್ಲಿ ಭಾರತದ ವಿರುದ್ಧ ನೀಡಲಾಗಿರುವ ಅನಗತ್ಯ ಹಾಗೂ ವಾಸ್ತವಿಕವಾಗಿ ಸತ್ಯವಲ್ಲದ ಹೇಳಿಕೆಗಳನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸುತ್ತದೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.