ಗ್ರಾಹಕರು ಬಳಸುವ ಮೊಬೈಲ್ ಆಧಾರದಲ್ಲಿ ಒಂದೇ ಸೇವೆಗೆ ವಿಭಿನ್ನ ದರ ಆರೋಪ: ಓಲಾ, ಉಬರ್ ಸಂಸ್ಥೆಗಳಿಗೆ ಕೇಂದ್ರ ಸರಕಾರ ನೋಟಿಸ್

OLA , UBER
ಹೊಸದಿಲ್ಲಿ: ಓಲಾ ಮತ್ತು ಉಬರ್ ಕಂಪೆನಿಗಳು ಗ್ರಾಹಕರು ಬಳಸುವ ಮೊಬೈಲ್ ಆಧಾರದಲ್ಲಿ ಒಂದೇ ಸೇವೆಗೆ ವಿಭಿನ್ನ ದರಗಳನ್ನು ವಿಧಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಗ್ರಾಹಕ ವ್ಯವಹಾರಗಳ ಸಚಿವಾಲಯ ಗುರುವಾರ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಗ್ರಾಹಕರು iPhone ಅಥವಾ Android ಮೊಬೈಲ್ ಬಳಕೆ ಮಾಡುತ್ತಿದ್ದಾರೆಯೇ ಎಂಬುವುದರ ಆಧಾರದ ಮೇಲೆ ಓಲಾ ಮತ್ತು ಉಬರ್ ಕಂಪೆನಿಗಳು ಒಂದೇ ಸೇವೆಗೆ ವಿಭಿನ್ನ ದರಗಳನ್ನು ವಿಧಿಸುತ್ತಿರುವ ವರದಿಗಳ ನಂತರ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) ನೋಟಿಸ್ ನೀಡಿದ್ದು, ಓಲಾ ಮತ್ತು ಉಬರ್ ಕಂಪೆನಿಗಳಿಗೆ ತಮ್ಮ ಬೆಲೆ ವಿಧಾನಗಳನ್ನು ವಿವರಿಸಲು ಮತ್ತು ಶುಲ್ಕದ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತತೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ದಿಲ್ಲಿ ಮೂಲದ ಉದ್ಯಮಿಯೋರ್ವರು ಓಲಾ ಮತ್ತು ಉಬರ್ ಒಂದೇ ಸೇವೆಗೆ ಗ್ರಾಹಕರು ಬಳಸುವ ಮೊಬೈಲ್ ಆಧಾರದಲ್ಲಿ ವಿಭಿನ್ನ ದರಗಳನ್ನು ವಿಧಿಸುತ್ತಿರುವ ಬಗ್ಗೆ ಸಾಕ್ಷಿ ಸಮೇತ ಬೆಳಕು ಚೆಲ್ಲಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.





