"ಪರಸ್ಪರ ಜಗಳವಾಡುತ್ತಿರಿ!": ದಿಲ್ಲಿಯಲ್ಲಿ ಬಿಜೆಪಿ ಮುನ್ನಡೆಗೆ ಆಪ್- ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಉಮರ್ ಅಬ್ದುಲ್ಲಾ

ರಾಹುಲ್ ಗಾಂಧಿ / ಉಮರ್ ಅಬ್ದುಲ್ಲಾ / ಅರವಿಂದ್ ಕೇಜ್ರಿವಾಲ್ (PTI)
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ನಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದ್ದು, 47 ಸ್ಥಾನಗಳ ಮುನ್ನಡೆಯೊಂದಿಗೆ ಬಹುಮತದ ಗೆರೆ ದಾಟಿದೆ. ಆಡಳಿತಾರೂಢ ಆಪ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ 23 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇದರ ಬೆನ್ನಿಗೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ಮತ್ತು ನೀವು ಪರಸ್ಪರ ಜಗಳವಾಡುತ್ತಿರಿ” ಎಂದು ಇಂಡಿಯಾ ಮೈತ್ರಿಕೂಟದೊಳಗಿನ ಆಂತರಿಕ ಭಿನ್ನಮತದ ಕುರಿತು ವಾಗ್ದಾಳಿ ನಡೆಸಿದ್ದಾರೆ.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳಾದ ಆಪ್ ಮತ್ತು ಕಾಂಗ್ರೆಸ್, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದವು.
ಈ ನಡುವೆ, ಆರಂಭಿಕ ಟ್ರೆಂಡ್ ಗಳ ಪ್ರಕಾರ, ಆಡಳಿತಾರೂಢ ಆಪ್ ಪಕ್ಷದ ಪ್ರಮುಖ ಅಭ್ಯರ್ಥಿಗಳು ಹಿನ್ನಡೆ ಅನುಭವಿಸುತ್ತಿದ್ದು, ದಿಲ್ಲಿ ಮುಖ್ಯಮಂತ್ರಿ ಅತಿಶಿ ಕೂಡಾ ಕಲ್ಕಜಿ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆಗೆ ಗುರಿಯಾಗಿದ್ದಾರೆ. ಅಲ್ಲದೆ ಪತ್ಪರ್ ಗಂಜ್ ನಲ್ಲಿ ಅವಧ್ ಓಜಾ ಕೂಡಾ ಹಿನ್ನಡೆ ಅನುಭವಿಸುತ್ತಿದ್ದಾರೆ.







