ಮರಣ ದಂಡನೆಗೆ ಗುರಿಯಾಗಿದ್ದ ಸರಣಿ ಕೊಲೆ ಆರೋಪಿ 19 ವರ್ಷ ಬಳಿಕ ದೋಷಮುಕ್ತ

PC | timesofindia
ಹೊಸದಿಲ್ಲಿ: ಸುಪ್ರೀಂಕೋರ್ಟ್ ಸೇರಿ ವಿವಿಧ ನ್ಯಾಯಾಲಯಗಳ ತೀರ್ಪಿನಂತೆ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ 2006ರ ನಿತಾರಿ ಸರಣಿ ಕೊಲೆ ಆರೋಪಿ ಸುಂದರ್ ಕೋಲಿ 19 ವರ್ಷಗಳ ಬಳಿಕ ದೋಷಮುಕ್ತನಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ವಿಚಾರಣಾ ನ್ಯಾಯಾಲಯ, ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಈ ಮೊದಲು 13 ಕೊಲೆ ಆರೋಪ ಎದುರಿಸುತ್ತಿದ್ದ ಈತನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಜತೆಗೆ ಈತನ ಪರಾಮರ್ಶನಾ ಅರ್ಜಿಯೂ ತಿರಸ್ಕೃತಗೊಂಡಿತ್ತು. ತನ್ನ ವಿರುದ್ಧ ಬಾಕಿ ಇದ್ದ ಕೊನೆಯ ಪ್ರಕರಣದಲ್ಲಿ ಕೋಲಿ ಸಲ್ಲಿಸಿದ್ದ ಕ್ಯೂರೇಟಿವ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಂಗಳವಾರ ತನ್ನ ಲೋಪವನ್ನು ಸರಿಪಡಿಸಿಕೊಂಡು ಆರೋಪಿಯನ್ನು ದೋಷಮುಕ್ತಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿಕ್ರಂನಾಥ್ ಅವರನ್ನೊಳಗೊಂಡ ಪೀಠ, ರಿಂಪಾ ಹಲ್ದಾರ್ ಹತ್ಯೆ ಪ್ರಕರಣದಲ್ಲಿ ಕ್ಯುರೇಟಿವ್ ಅರ್ಜಿಯನ್ನು ಪುರಸ್ಕರಿಸಿ, ಇತರ 12 ಕೊಲೆ ಪ್ರಕರಣಗಳಲ್ಲಿ ಕೂಡಾ ಸಲ್ಲಿಕೆಗೆ ಅರ್ಹವಲ್ಲ ಎನಿಸಿದ ಪುರಾವೆ ಆಧಾರದಲ್ಲಿ ಆತನನ್ನು ದೋಷಮುಕ್ತಗೊಳಿಸಿದೆ.
ಸುಪ್ರೀಂಕೋರ್ಟ್ 2011ರಲ್ಲಿ ಹಲ್ದಾರ್ ಪ್ರಕರಣದಲ್ಲಿ ಕೋಲಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು ಹಾಗೂ 2014ರಲ್ಲಿ ಪರಾಮರ್ಶನಾ ಅರ್ಜಿಯನ್ನು ತಿರಸ್ಕರಿಸಿತ್ತು.
ಕಳೆದ ಜುಲೈನಲ್ಲಿ ಸುಪ್ರೀಂಕೋರ್ಟ್, 12 ನಿತಾರಿ ಕೊಲೆ ಪ್ರಕರಣಗಳಲ್ಲಿ ಕೋಲಿಯನ್ನು ದೋಷಮುಕ್ತಗೊಳಿಸಿ 2023ರ ಅಕ್ಟೋಬರ್ನಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿತ್ತು. ಪೊಲೀಸರ ಲೋಪದಿಂದಾಗಿ ಪ್ರಮುಖ ಪುರಾವೆಗಳು ಸ್ವೀಕಾರಾರ್ಹವಾಗಿಲ್ಲ ಎಂದು ಹೇಳಿತ್ತು. ಇದೇ ಆಧಾರದಲ್ಲಿ ತನ್ನ ವಿರುದ್ಧದ ಎಲ್ಲ ಪ್ರಕರಣಗಳಲ್ಲಿ ಸಲ್ಲಿಕೆಯಾಗಿರುವ ಪುರಾವೆಗಳು ಕಾನೂನಾತ್ಮಕವಾಗಿ ಸ್ವೀಕಾರಾರ್ಹವಲ್ಲ ಎಂದು ವಾದಿಸಿ ಕ್ಯುರೇಟಿವ್ ಅರ್ಜಿ ಸಲ್ಲಿಸಲಾಗಿತ್ತು.







