ಸ್ವಸಹಾಯ ಗುಂಪಿನಿಂದ ಲಕ್ಷಾಧೀಶೆಯರಾದ ಒಂದು ಕೋಟಿ ಮಹಿಳೆಯರು!

Photo: twitter.com/businessline
ಹೊಸದಿಲ್ಲಿ: ಮಹಿಳಾ ಸ್ವಸಹಾಯ ಗುಂಪುಗಳ ಕಾರ್ಯಚಟುವಟಿಕೆಗಳಿಂದ ವಾರ್ಷಿಕ ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯ ಗಳಿಸುವ ಮಹಿಳೆಯರ ಸಂಖ್ಯೆ ಒಂದು ಕೋಟಿಯನ್ನು ದಾಟಿದೆ ಎನ್ನುವ ಅಂಶ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಆಂಧ್ರ ಪ್ರದೇಶದಲ್ಲಿ ಅತಿಹೆಚ್ಚು ಲಕ್ಷಾಧೀಶೆಯರಿದ್ದು, 13.65 ಕೋಟಿ ಅಂತಹ ಮಹಿಳೆಯರಿದ್ದರೆ ಬಿಹಾರ (1.16 ಲಕ್ಷ) ಮತ್ತು ಪಶ್ಚಿಮ ಬಂಗಾಳ (10.11 ಲಕ್ಷ) ನಂತರದ ಸ್ಥಾನಗಳಲ್ಲಿವೆ.
ಲಕ್ಷದ್ವೀಪದಲ್ಲಿ ಈ ಸಾಧನೆ ಮಾಡಿದ ಮಹಿಳೆಯರು ಯಾರೂ ಇಲ್ಲ.ಅಂಡಮಾನ್ & ನಿಕೋಬಾರ್ ನಲ್ಲಿ ಕೇವಲ 242 ಮಂದಿ ಹಾಗೂ ಗೋವಾದಲ್ಲಿ 206 ಮಂದಿ ಇಂಥ ಮಹಿಳೆಯರಿದ್ದು, ಈ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ಲಕ್ಷಾಧೀಶೆ ಮಹಿಳೆಯರ ಪಟ್ಟಿಯಲ್ಲಿ ಕೊನೆಯ ಸ್ಥಾನಗಳಲ್ಲಿವೆ.
'ಲಾಕ್ಪತಿ ದೀದಿ' ಯೋಜನೆಯನ್ನು ಕಳೆದ ವರ್ಷದ ಸ್ವಾತಂತ್ರ್ಯ ದಿನದಂದು ಘೋಷಿಸಿದ ಪ್ರಧಾನಿ ಅವರು ದೇಶದ ಗ್ರಾಮಗಳಲ್ಲಿ ಎರಡು ಕೋಟಿ ಇಂತಹ ಮಹಿಳೆಯರನ್ನು ಸೃಷ್ಟಿಸುವ ಕನಸು ಕಂಡಿದ್ದರು. ಬಜೆಟ್ ಭಾಷಣದಲ್ಲಿ ಸರ್ಕಾರ ಈ ಗುರಿಯನ್ನು 3 ಕೋಟಿಗೆ ಹೆಚ್ಚಿಸಿತ್ತು. ಈ ಯೋಜನೆಯಡಿ 3 ವರ್ಷಗಳ ಅವಧಿಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ಎಂಬ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿತ್ತು.
ಇದರಲ್ಲಿ ಮಹಿಳೆಯರಿಗೆ ತರಬೇತಿ, ಉದ್ದಿಮೆ ಹಣಕಾಸು ನೆರವು, ಬ್ಯಾಂಕ್ ಮತ್ತು ಸಾಲ ಸಂಪರ್ಕ ಹೀಗೆ ಸುಸ್ಥಿರ ವಾರ್ಷಿಕ ಆದಾಯವನ್ನು ಗಳಿಸಿ ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಗಳಿಂದ ಒಂದು ಲಕ್ಷ ರೂಪಾಯಿ ಆದಾಯ ಪಡೆಯುವಂತೆ ಅಗತ್ಯ ನೆರವು ನೀಡಲಾಗುತ್ತಿದೆ.
ಇಂತಹ ಸ್ವಸಹಾಯ ಗುಂಪುಗಳಲ್ಲಿ 10 ಕೋಟಿ ಕುಟುಂಬಗಳನ್ನು ಜೋಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 6.68 ಲಕ್ಷ, ಗುಜರಾತ್- 4.94 ಲಕ್ಷ, ತಮಿಳುನಾಡಿನಲ್ಲಿ 2.64 ಲಕ್ಷ, ಕೇರಳದಲ್ಲಿ 2.31 ಲಕ್ಷ ಲಾಕ್ಪತಿ ದೀದಿಯರಿದ್ದಾರೆ. ಮಧ್ಯಪ್ರದೇಶ 9.54 ಲಕ್ಷ, ಮಹಾರಾಷ್ಟ್ರ 8.99 ಲಕ್ಷ, ರಾಜಸ್ಥಾನ 2.02 ಲಕ್ಷವನ್ನು ತಲುಪಿವೆ.







