ಉತ್ತರಪ್ರದೇಶದಲ್ಲಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿದ ನಾಲ್ವರಲ್ಲಿ ಒಬ್ಬರದ್ದು ತಪ್ಪು ವಿಳಾಸ!

ಸಾಂದರ್ಭಿಕ ಚಿತ್ರ.
ಲಕ್ನೊ : ಉತ್ತರಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ನಾಲ್ವರಲ್ಲಿ ಒಬ್ಬರು ತಪ್ಪು ವಿಳಾಸ ಹೊಂದಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಇತ್ತೀಚೆಗೆ ಶಸ್ತ್ರಾಸ್ತ್ರ ಪರವಾನಿಗೆಗಾಗಿ ವಿಳಾಸ ಪರಿಶೀಲನೆ ನಡೆಸುತ್ತಿರುವ ಸಂದರ್ಭ ಇದು ಬಹಿರಂಗಗೊಂಡಿದೆ.
ಬಂದೂಕು ಪರವಾನಿಗೆದಾರರು ಸ್ಥಳಾಂತರಗೊಂಡಾಗ ತಮ್ಮ ವಿಳಾಸವನ್ನು ನವೀಕರಿಸದೇ ಇರುವುದು ಅಥವಾ ಬಂದೂಕು ಪರವಾನಿಗೆಗೆ ಅರ್ಜಿ ಸಲ್ಲಿಸಿದ ಸಂದರ್ಭ ಸುಳ್ಳು ಮಾಹಿತಿ ನೀಡಿರುವುದು ತನಿಖಾ ಸಂಸ್ಥೆ ಪರಿಶೀಲನೆ ನಡೆಸಲು ಕಾರಣವಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಬಂದೂಕು ಪರವಾನಿಗೆದಾರರ ವಿಳಾಸ ಪರಿಶೀಲನೆ ಸಂದರ್ಭ ಈ ವಿಚಾರ ಬೆಳಕಿಗೆ ಬಂದಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಶಸ್ತ್ರಸ್ತ್ರ ಪರವಾನಿಗೆದಾರರ ಕೂಲಕಂಷ ಪರಿಶೀಲನೆಗೆ ಪ್ರೇರಣೆ ನೀಡಿದೆ.
ಚುನಾವಣಾ ಆಯೋಗದ ಆದೇಶಗಳಿಗೆ ಅನುಗುಣವಾಗಿ ನಡೆಸಿದ ಪರಿಶೀಲನಾ ಪ್ರಯತ್ನಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರ ಶಸ್ತ್ರಾಸ್ತ್ರ ಪರವಾನಿಗೆ ರದ್ದುಪಡಿಸುವ ಪ್ರಕ್ರಿಯೆಯನ್ನು ಆರಂಭಿಸಲು ಕಾರಣವಾಗಿದೆ ಎಂದು ಎಡಿಜಿ ಅಖಿಲ್ ಕುಮಾರ್ ತಿಳಿಸಿದ್ದಾರೆ.
ಗೋರಖ್ಪುರ ವಲಯವೊಂದರಲ್ಲೇ 16,162 ಶಸ್ತ್ರಾಸ್ತಗಳ ಪರವಾನಿಗೆ ಹೊಂದಿದವರ ನೋಂದಾಯಿತ ವಿಳಾಸಗಳು ಪತ್ತೆಯಾಗದೇ ಇರುವುದು ದಿಗ್ಭ್ರಮೆ ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯದ ಕುರಿತಂತೆ ಸಮಗ್ರ ವರದಿಯನ್ನು ಉನ್ನತ ಅಧಿಕಾರಿಗಳಿಗೆ ರವಾನಿಸಲಾಗಿದೆ.
ವಿಳಾಸದ ಪರಿಶೀಲನೆ ಸಂದರ್ಭ ಗೋರಖ್ಪುರದಲ್ಲಿ 21,624 ಶಸ್ತ್ರಾಸ್ತ್ರ ಪರವಾನಿಗೆದಾರರಲ್ಲಿ 7,955 ಮಂದಿ ನೋಂದಾಯಿತ ವಿಳಾಸದಲ್ಲಿ ಪತ್ತೆಯಾಗಿಲ್ಲ.
ಇದೇ ರೀತಿಯ ಪ್ರವೃತ್ತಿ ನೆರೆಯ ಜಿಲ್ಲೆಗಳಲ್ಲಿ ಕೂಡ ಕಂಡು ಬಂದಿದೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವ ದಿಯೋರಿಯಾದ 13,337ರಲ್ಲಿ 3,417 ಮಂದಿ, ಮಹಾರಾಜ್ಗಂಜ್ನ 3,515ರಲ್ಲಿ 405 ಮಂದಿ, ಕುಶಿನಗರದ 5,368ರಲ್ಲಿ 543 ಮಂದಿ ಹಾಗೂ ಬಸ್ತಿಯ 7,429ರಲ್ಲಿ 429 ಮಂದಿ ತಮ್ಮ ವಿಳಾಸವನ್ನು ಪರಿಷ್ಕರಿಸದೇ ಸ್ಥಳಾಂತರಗೊಂಡಿದ್ದಾರೆ.







