15 ಶ್ರೀಮಂತ ಉದ್ಯಮಿಗಳು ಭಾರತವನ್ನು ನಡೆಸುತ್ತಿದ್ದಾರೆ: ಭಾರತದ ಜೊತೆಗಿನ ವ್ಯಾಪಾರ ಮಾತುಕತೆ ವಿಫಲತೆಗೆ ತನ್ನ ಪುಸ್ತಕದಲ್ಲಿ ಕಾರಣ ಉಲ್ಲೇಖಿಸಿದ್ದ ಟ್ರಂಪ್ ಮಾಜಿ ವ್ಯಾಪಾರ ಸಮಾಲೋಚಕ

ರಾಬರ್ಟ್ ಲೈಟ್ ಹೈಝರ್ (Photo: X/@USTradeRep45)
ಹೊಸದಿಲ್ಲಿ: ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಸುಂಕ ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವ ಮಧ್ಯೆ ಟ್ರಂಪ್ ಅವರ ವ್ಯಾಪಾರ ಕಾರ್ಯಸೂಚಿಯನ್ನು ನಿಗದಿಪಡಿಸಿದ್ದ ಮತ್ತು ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಿದ್ದ ಅಮೆರಿಕದ ಮಾಜಿ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್ ಹೈಝರ್ 2023ರ ತನ್ನ ಪುಸ್ತಕದಲ್ಲಿ ಭಾರತದ ಜೊತೆಗಿನ ವ್ಯಾಪಾರದ ಬಗ್ಗೆ ಕೆಲವೊಂದು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಅಗಾಧವಾದ ರಾಜಕೀಯ ಪ್ರಭಾವ ಹೊಂದಿರುವ 15 ಅತ್ಯಂತ ಶ್ರೀಮಂತ ಉದ್ಯಮಿಗಳು ಭಾರತವನ್ನು ನಡೆಸುತ್ತಿದ್ದಾರೆ ಎಂದು ಪುಸ್ತಕದಲ್ಲಿ ಹೇಳಿದ್ದಾರೆ.
ʼನೋ ಟ್ರೇಡ್ ಈಸ್ ಫ್ರೀʼ ( No Trade is Free) ಎಂಬ ಪುಸ್ತಕದಲ್ಲಿ ರಾಬರ್ಟ್ ಲೈಟ್ ಹೈಝರ್, ಭಾರತಕ್ಕೆ ಸಂಬಂಧಿಸಿದ ವ್ಯಾಪಾರ ಮಾತುಕತೆಗಳಲ್ಲಿ ಭಾರತ ಯಾವ ನಿಲುವು ತಾಳಬಹುದು ಎಂಬುದನ್ನು ಊಹಿಸಲು ಭಾರತದ 15 ಮಂದಿ ಶತಕೋಟಿ ಉದ್ಯಮಿಗಳ ಅಥವಾ ದೇಶವನ್ನು ನಿಯಂತ್ರಿಸುತ್ತಿದ್ದವರಂತೆ ಕಂಡು ಬಂದ ಶ್ರೀಮಂತ ಉದ್ಯಮಿಗಳ ಹಿತಾಸಕ್ತಿಗಳನ್ನು ಗಮನಿಸುತ್ತಿದ್ದರು ಎಂದು ಹೇಳಿದ್ದಾರೆ. ಪುಸ್ತಕ ಎರಡು ಅವಧಿಯಲ್ಲಿ ಅಮೆರಿಕ ಅಧ್ಯಕ್ಷರ ಭಾರತದ ನೀತಿ ಹೇಗೆ ರೂಪುಗೊಂಡಿದೆ ಎಂಬುದರ ಬಗ್ಗೆ ಒಳನೋಟ ನೀಡುತ್ತದೆ.
"ನಾನು ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾಗ, ದೇಶದ ಹದಿನೈದು ಅಥವಾ ಅದಕ್ಕಿಂತ ಹೆಚ್ಚು ಶತಕೋಟ್ಯಾಧಿಪತಿಗಳ ಬಗ್ಗೆ ಮಾಹಿತಿ ಪ್ರತಿಯನ್ನು ನನ್ನ ಮೇಜಿನ ಮೇಲೆ ಇಟ್ಟುಕೊಂಡಿದ್ದೆ. ಭಾರತ ಯಾವ ನಿಲುವು ತೆಗೆದುಕೊಳ್ಳಬಹುದು ಎಂದು ಊಹಿಸಲು, ನಾನು ಉದ್ಯಮಿಗಳ ಹಿತಾಸಕ್ತಿಗಳನ್ನು ಗಮನಿಸುತ್ತಿದ್ದೆ" ಎಂದು ರಾಬರ್ಟ್ ಲೈಟ್ ಹೈಝರ್ 2023ರಲ್ಲಿ ಪ್ರಕಟವಾದ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.
ಅವರು ಈ ಶತಕೋಟ್ಯಾಧಿಪತಿಗಳನ್ನು "ಒಲಿಗಾರ್ಚ್ ಗಳು" ಎಂದು ಉಲ್ಲೇಖಿಸಿದರು. ಭಾರತದಲ್ಲಿ ಉದ್ಯಮಿಗಳು ಸರಕಾರಿ ನೀತಿಯ ಮೇಲೆ ಪ್ರಭಾವ ಬೀರುತ್ತಾರೆ. ಭಾರತ ಸರಕಾರದ ಎಲ್ಲಾ ಕ್ಷೇತ್ರಗಳಲ್ಲಿ ಈ ಪ್ರಬಲವಾದ ವ್ಯವಸ್ಥೆ ಇದೆ ಎಂದು ಹೇಳಿದರು.
ರಾಬರ್ಟ್ ಲೈಟ್ ಹೈಝರ್ ಅಮೆರಿಕದ ಅನುಭವಿ ವ್ಯಾಪಾರ ಸಮಾಲೋಚಕ. ಒಂದು ಕಾಲದಲ್ಲಿ ಮುಕ್ತ-ವ್ಯಾಪಾರ ಒಪ್ಪಂದದ ಬಗ್ಗೆ ಅನುಮಾನ ಹೊಂದಿದ್ದ ಲೈಟ್ ಹೈಝರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ನೀಡುತ್ತಿದ್ದ ವಿಶೇಷ ವ್ಯಾಪಾರ ಸೌಲಭ್ಯವನ್ನು ಹಠಾತ್ ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.
ಸೋಮವಾರ ತಡರಾತ್ರಿ, ಟ್ರಂಪ್ ಭಾರತದ ಮೇಲೆ ಗಣನೀಯ ಪ್ರಮಾಣದ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದರು. ಭಾರತ ರಷ್ಯಾದಿಂದ ತೈಲವನ್ನು ಖರೀದಿಸಿ ದೊಡ್ಡ ಲಾಭದಲ್ಲಿ ಮರುಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದರು.







