ಆಪರೇಷನ್ ಸಿಂಧೂರ: ಭಾರತೀಯ ಸೇನೆಯ ವಾಯು ಸುರಕ್ಷಾ ಘಟಕ ನಾಶಪಡಿಸಿದ ಪಾಕ್ ಡ್ರೋನ್ಗಳೆಷ್ಟು ಗೊತ್ತೇ?

PC: TOI
ಹೊಸದಿಲ್ಲಿ: ಆಪರೇಷನ್ ಸಿಂಧೂರ ಬಳಿಕ ಭಾರತದ ಮೇಲೆ ಪಾಕಿಸ್ತಾನ ಉಡಾಯಿಸಿದ 600ಕ್ಕೂ ಹೆಚ್ಚು ಡ್ರೋನ್ಗಳನ್ನು ಪಶ್ಚಿಮ ಗಡಿಭಾಗದಲ್ಲಿ ನಿಯೋಜಿಸಲಾದ ಭಾರತೀಯ ಸೇನೆಯ ವಾಯು ಸುರಕ್ಷಾ ಘಟಕಗಳು ನಾಶಪಡಿಸಿವೆ.
ವೈವಿಧ್ಯಮಯ ರಾಡಾರ್ ಗಳಿಗೆ ಜೋಡಿಸಲ್ಪಟ್ಟ ವಿವಿಧ ಗಾತ್ರ ಮತ್ತು ಆಕಾರದ 1000ಕ್ಕೂ ಅಧಿಕ ಎಡಿ ಗನ್ ಸಿಸ್ಟಂ ಮತ್ತು 750 ಅಲ್ಪ ಮತ್ತು ಮಧ್ಯಮ ಸಾಮರ್ಥ್ಯದ ಸರ್ಫೇಸ್-ಟೂ-ಏರ್ ಮಿಸೈಲ್ (ಎಸ್ಎಎಮ್) ವ್ಯವಸ್ಥೆಗಳನ್ನು ಅತ್ಯಲ್ಪ ಅವಧಿಯಲ್ಲೇ ನಿಯೋಜಿಸಲಾಗಿತ್ತು. ಇದು ಬಹು ಹಂತದ ವಾಯು ಸುರಕ್ಷಾ ಜಾಲವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಶಾಂತಿ ಸಮಯದ ಕಣ್ಗಾವಲಿಗೆ ಸಜ್ಜಾಗಿದ್ದ ವ್ಯವಸ್ಥೆ, ಪಾಕಿಸ್ತಾನ ಅನಾವರಣಗೊಳಿಸಿದ ಡ್ರೋನ್ ಅಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಯಿತು.
"ಈ ಕಾರ್ಯಾಚರಣೆಯು ಪ್ರಮುಖ ಸೇನಾ ಮತ್ತು ನಾಗರಿಕ ಮೂಲಸೌಕರ್ಯವನ್ನು ರಕ್ಷಿಸಿದ್ದು ಮಾತ್ರವಲ್ಲದೇ, ಡ್ರೋನ್ ಪ್ರಾಬಲ್ಯವನ್ನು ಛಿದ್ರಗೊಳಿಸುವಲ್ಲೂ ಪ್ರಮುಖ ಪಾತ್ರ ವಹಿಸಿತು. ದೇಶೀಯ ತಂತ್ರಜ್ಞಾನ ಮತ್ತು ತೀವ್ರ ತರಬೇತಿಯ ಹಿನ್ನೆಲೆಯನ್ನು ಹೊಂದಿದ್ದ ಈ ವ್ಯವಸ್ಥೆ ನಿಖರವಾಗಿ ನಮ್ಮ ವಾಯುಪ್ರದೇಶವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು" ಎಂದು ಹಿರಿಯ ಸೇನಾ ವಾಯು ಸುರಕ್ಷಾ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಸರಣಿಯಾಗಿ ಶಸ್ತ್ರಸಜ್ಜಿತ ಡ್ರೋನ್ ಗಳನ್ನು ಉಡಾಯಿಸುವ ಪಾಕಿಸ್ತಾನದ ಕಾರ್ಯತಂತ್ರವು ಭಾರತೀಯ ವಾಯುಸುರಕ್ಷಾ ರಾಡಾರ್ ಜಾಲವನ್ನು ಮತ್ತು ಭಾರತದ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ವಿನ್ಯಾಸವನ್ನು ಗುರುತಿಸಿ ಪರೀಕ್ಷಿಸುವ ಗುರಿ ಹೊಂದಿತ್ತು. ಐದು ವರ್ಷಗಳಿಂದ ಪೂರ್ವ ಲಡಾಖ್ ನಲ್ಲಿ ಚೀನಾ ಜತೆಗಿನ ಸಂಘರ್ಷದಿಂದಾಗಿ ಭಾರತದ ಸುರಕ್ಷಾ ವ್ಯವಸ್ಥೆ ಸಜ್ಜಾಗಿದ್ದು, ಐದು ವರ್ಷಗಳ ನಿಯತ ಹಾಗೂ ತುರ್ತು ಖರೀದಿ ಮೂಲಕ ಸಾಕಷ್ಟು ದಾಸ್ತಾನನ್ನು ಹೊಂದಿತ್ತು.







