ಭಾರತವು ಪಾಕ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಹೆಸರನ್ನು ಆಯ್ದುಕೊಂಡಿದ್ದೇಕೆ?

PC : NDTV
ಹೊಸದಿಲ್ಲಿ: ಸಶಸ್ತ್ರ ಪಡೆಗಳು ಬುಧವಾರ ನಸುಕಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಜಮ್ಮುಕಾಶ್ಮೀರದ ಪ್ರವಾಸಿಗಳ ಕ್ರೂರ ಹತ್ಯೆಗಳಿಗೆ ಭಾರತದ ಉತ್ತರವಾಗಿತ್ತು. ಎ.22ರ ಘಟನಾವಳಿಗಳೊಂದಿಗೆ ನೇರ ಸಂಬಂಧ ಹೊಂದಿರುವುದರಿಂದ ಈ ಹೆಸರನ್ನು ಆಯ್ಕೆ ಮಾಡಲಾಗಿತ್ತು.
ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಪ್ರವಾಸಿಗಳನ್ನು ಕೊಂದಿದ್ದ ನಾಲ್ವರು ಭಯೋತ್ಪಾದಕರು ಮುಸ್ಲಿಮೇತರ ಪುರುಷರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದರು. ಕೊಲ್ಲಲ್ಲಟ್ಟ 26 ಪುರುಷರಲ್ಲಿ 23 ಹಿಂದುಗಳು ಮತ್ತು ಇಬ್ಬರು ಕ್ರೈಸ್ತರಾಗಿದ್ದರು. ಪ್ರವಾಸಿಗಳನ್ನು ರಕ್ಷಿಸಲು ಭಯೋತ್ಪಾದಕರನ್ನು ಎದುರಿಸಿದ್ದ ಕುದುರೆ ಸವಾರ ಸೈಯದ್ ಆದಿಲ್ ಹುಸೇನ್ ಶಾ ಹತ್ಯೆಯಾದ ಏಕೈಕ ಮುಸ್ಲಿಮ್ ವ್ಯಕ್ತಿಯಾಗಿದ್ದರು.
ಪಹಲ್ಗಾಮ್ನಿಂದ ಹೊರಬಿದ್ದಿದ್ದ ಅತ್ಯಂತ ಹೃದಯಸ್ಪರ್ಶಿ ಚಿತ್ರಗಳಲ್ಲೊಂದು ಭಾರತೀಯ ನೌಕಾಪಡೆಯ ಲೆಫ್ಟಿನಂಟ್ ವಿನಯ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಅವರದಾಗಿತ್ತು. ಎ.16ರಷ್ಟೇ ಮದುವೆಯಾಗಿದ್ದ ದಂಪತಿ ಹನಿಮೂನ್ಗಾಗಿ ಪಹಲ್ಗಾಮ್ನಲ್ಲಿದ್ದರು. ಅರುಣಾಚಲ ಪ್ರದೇಶದ ಝೈರೊ ನಿವಾಸಿ ಭಾರತೀಯ ವಾಯುಪಡೆಯ ಕಾರ್ಪೊರಲ್ ತಾಗೆ ಹೈಲಿಯಾಂಗ್ ಅವರೂ ಭಯೋತ್ಪಾದಕರ ಗುಂಡಿಗೆ ಬಲಿಯಾದಾಗ ಪತ್ನಿಯೊಂದಿಗೆ ರಜಾದಿನಗಳ ಆನಂದವನ್ನು ಅನುಭವಿಸುತ್ತಿದ್ದರು.
ಅಪ್ರಚೋದಿತ ದಾಳಿಯಲ್ಲಿ ವಿಧವೆಯರಾದ ಮಹಿಳೆಯರ ಗೌರವಾರ್ಥ ‘ಆಪರೇಷನ್ ಸಿಂಧೂರ’ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದು ಸ್ಪಷ್ಟವಾಗಿದೆ. ಹಿಂದು ಧರ್ಮದಲ್ಲಿ ಸಿಂಧೂರ ಅಥವಾ ಕುಂಕುಮ ವಿವಾಹಿತ ಮಹಿಳೆಯರ ಗುರುತು ಆಗಿದ್ದು, ಹಣೆಯ ಮಧ್ಯಭಾಗದಲ್ಲಿ ಅದನ್ನು ಧರಿಸಲಾಗುತ್ತದೆ. ಅದನ್ನು ಭಕ್ತಿ,ಅದೃಷ್ಟ ಮತ್ತು ಪತಿಗೆ ಬದ್ಧತೆಯ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ವಿಧವೆಯರು ಸಿಂಧೂರವನ್ನು ಧರಿಸುವುದಿಲ್ಲ.
‘‘ಕಾರ್ಯಾಚರಣೆಯ ಹೆಸರು ‘ಸಿಂಧೂರ’ ಮತ್ತು ನನ್ನ ತಾಯಿಯಂತಹ ಮಹಿಳೆಯರನ್ನು ಗೌರವಿಸಲು ಈ ಹೆಸರನ್ನಿಡಲಾಗಿದೆ ಎಂದು ನಾನು ಭಾವಿಸಿದ್ದೇನೆ’’ ಎಂದು ಪಹಲ್ಗಾಮ್ ನಲ್ಲಿ ಮೃತಪಟ್ಟ ಪುಣೆಯ ಕೌಸ್ತುಭ್ ಗಾನಬೋಟೆಯವರ ಪುತ್ರ ಕುನಾಲ್ ಗಾನಬೋಟೆ ಸುದ್ದಿಸಂಸ್ಥೆಗೆ ತಿಳಿಸಿದರು.
ಕೇಂದ್ರ ಸಚಿವರು ಸೇರಿದಂತೆ ಅಧಿಕಾರಿಗಳು ಟ್ವೀಟಿಸಿರುವ ಅಧಿಕೃತ ಕಲಾಕೃತಿಯು ಕಪ್ಪು ಹಿನ್ನೆಲೆಯಲ್ಲಿ ಆಪರೇಶನ್ ಸಿಂಧೂರ ಪದಗಳ ಮೇಲೆ ಚೆಲ್ಲಿರುವ ಕುಂಕುಮದ ಬಟ್ಟಲನ್ನು ಒಳಗೊಂಡಿದೆ. ಭಾರತೀಯ ಸೇನೆಯ ಹೆಚ್ಚುವರಿ ಸಾರ್ವಜನಿಕ ಮಾಹಿತಿ ಮಹಾ ನಿರ್ದೇಶನಾಲಯವೂ ‘ನ್ಯಾಯವನ್ನು ಒದಗಿಸಲಾಗಿದೆ. ಜೈಹಿಂದ್’ ಎಂಬ ಅಡಿಬರಹದೊಂದಿಗೆ ಈ ಚಿತ್ರವನ್ನು ಟ್ವೀಟಿಸಿದೆ.
ರಾಷ್ಟ್ರಪತಿ ಮುರ್ಮುರನ್ನು ಭೇಟಿಯಾಗಿ ಮಾಹಿತಿ ನೀಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ‘ಆಪರೇಶನ್ ಸಿಂಧೂರ’ ಕುರಿತು ಮಾಹಿತಿಗಳನ್ನು ನೀಡಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ’ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರ ದಾಳಿಗಳನ್ನು ನಡೆಸಿವೆ.
‘‘ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ‘ಆಪರೇಷನ್ ಸಿಂಧೂರ’ ಕುರಿತು ಅವರಿಗೆ ಮಾಹಿತಿಗಳನ್ನು ನೀಡಿದರು’’ ಎಂದು ರಾಷ್ಟ್ರಪತಿ ಭವನವು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಪರಿಪೂರ್ಣ ದಾಳಿ, ಹೆಮ್ಮೆಯ ಘಳಿಗೆ: ಪ್ರಧಾನಿ ಮೋದಿ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ’ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೇಂದ್ರ ಸಂಪುಟಕ್ಕೆ ಮಾಹಿತಿಗಳನ್ನು ನೀಡಿದರು.
ಸಶಸ್ತ್ರ ಪಡೆಗಳು ಯಾವುದೇ ತಪ್ಪುಗಳಿಲ್ಲದಂತೆ ಕಾರ್ಯಾಚರಣೆಯನ್ನು ಯೋಜಿಸಿದ್ದಂತೆಯೇ ಅತ್ಯಂತ ನಿಖರವಾಗಿ ನಡೆಸಿವೆ ಎಂದು ಮೋದಿ ಸಂಪುಟಕ್ಕೆ ತಿಳಿಸಿದರು.
‘ಇದು ನಮ್ಮೆಲ್ಲರಿಗೂ ಹೆಮ್ಮೆಯ ಘಳಿಗೆಯಾಗಿದೆ’ ಎಂದು ಬಣ್ಣಿಸಿದ ಪ್ರಧಾನಿ,ಸಶಸ್ತ್ರ ಪಡೆಗಳ ಪರಿಪೂರ್ಣ ದಾಳಿಯು ಹೇಗೆ ಪಂಜಾಬ್ ಪ್ರಾಂತ್ಯದ ನಾಲ್ಕು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಐದು ಸೇರಿದಂತೆ ಪಾಕಿಸ್ತಾನದಲ್ಲಿಯ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತ್ತು ಎನ್ನುವುದನ್ನು ವಿವರಿಸಿದರು.
ದಾಳಿಯ ಗುರಿಗಳು,ವಿಧಾನ ಮತ್ತು ಸಮಯವನ್ನು ನಿರ್ಧರಿಸಲು ಕೇಂದ್ರವು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯವನ್ನು ನೀಡಿತ್ತು.
ಕಾರ್ಯಾಚರಣೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ‘ಭಾರತ ಮಾತಾ ಕಿ ಜೈ’ ಎಂದು ಹೇಳಿದರೆ ಭಾರತೀಯ ಸೇನೆಯು ‘ನ್ಯಾಯವನ್ನು ಒದಗಿಸಲಾಗಿದೆ’ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.







