ಸಿಡಿಎಸ್, ಮೂರು ಶಸಸ್ತ್ರ ಪಡೆಗಳ ವರಿಷ್ಠರಿಂದ ‘ಆಪರೇಷನ್ ಸಿಂಧೂರ’ ಬಗ್ಗೆ ರಾಷ್ಟ್ರಪತಿಗೆ ಮಾಹಿತಿ

ದ್ರೌಪದಿ ಮುರ್ಮು | PTI
ಹೊಸದಿಲ್ಲಿ: ‘ಆಪರೇಷನ್ ಸಿಂಧೂರ’ ಯೋಜನೆ ಹಾಗೂ ಕಾರ್ಯಗತಗೊಳಿಸುವಿಕೆ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಸೇನೆಯ ಪ್ರತಿಕ್ರಿಯೆ ಕುರಿತು ರಕ್ಷಣಾ ಸಿಬ್ಬಂದಿ ವರಿಷ್ಠ (ಸಿಡಿಎಸ್) ಹಾಗೂ ಮೂರು ಶಸಸ್ತ್ರ ಪಡೆಗಳ ವರಿಷ್ಠರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬುಧವಾರ ಮಾಹಿತಿ ನೀಡಿದರು.
ರಕ್ಷಣಾ ಸಿಬ್ಬಂದಿ ವರಿಷ್ಠ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರೊಂದಿಗೆ ಸೇನಾ ಪಡೆ ಸಿಬ್ಬಂದಿ ವರಿಷ್ಠ ಜನರಲ್ ಉಪೇಂದ್ರ ದ್ವಿವೇದಿ, ವಾಯು ಪಡೆ ಸಿಬ್ಬಂದಿ ವರಿಷ್ಠ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ನೌಕಾ ಪಡೆ ಸಿಬ್ಬಂದಿ ವರಿಷ್ಠ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ರಾಷ್ಟ್ರಪತಿ ಅವರನ್ನು ಭೇಟಿಯಾದರು ಹಾಗೂ ಕಾರ್ಯಾಚರಣೆಯ ವಿವರಗಳನ್ನು ನೀಡಿದರು ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.
ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಸಂಘಟಿತ ದಾಳಿಯಾಗಿ ‘ಆಪರೇಷನ್ ಸಿಂಧೂರ’ವನ್ನು ಆರಂಭಿಸಲಾಗಿತ್ತು. ಈ ಕಾರ್ಯಾಚರಣೆ ಪಹಾಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಗೆ ನೇರ ಪ್ರತೀಕಾರವಾಗಿತ್ತು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಸುಗಮಗೊಳಿಸಲು ಬಳಸುವ ಉಗ್ರ ನೆಲೆಗಳನ್ನು ನಾಶಗೊಳಿಸುವ ಉದ್ದೇಶವನ್ನು ಇದು ಹೊಂದಿತ್ತು.
ಶಸಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಕ್ಷಣಾ ತಂತ್ರಗಾರಿಕೆ, ಕಾರ್ಯಾಚರಣೆಯ ಕಾರ್ಯಗತಗೊಳಿಸುವಿಕೆ ಹಾಗೂ ಕಾರ್ಯಾಚರಣೆಯ ಫಲಿತಾಂಶವನ್ನು ಪ್ರಶಂಸಿಸಿದ್ದಾರೆ. ಭಾರತೀಯ ಶಸಸ್ತ್ರ ಪಡೆಗಳ ವೃತ್ತಿಪರತೆ, ಧೈರ್ಯ ಹಾಗೂ ತ್ವರಿತ ಕ್ರಮಕ್ಕೆ ಅವರು ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘‘ಭಯೋತ್ಪಾದನೆ ವಿರುದ್ಧದ ಭಾರತದ ಪ್ರತಿಕ್ರಿಯೆಗೆ ಅದ್ಭುತ ಯಶಸ್ಸು ಸಿಗುವಂತೆ ಮಾಡಿದ ಶಸಸ್ತ್ರ ಪಡೆಗಳ ಶೌರ್ಯ ಹಾಗೂ ಸಮರ್ಪಣೆಯನ್ನು ರಾಷ್ಟ್ರಪತಿ ಶ್ಲಾಘಿಸಿದ್ದಾರೆ’’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನ ಪೋಸ್ಟ್ನಲ್ಲಿ ರಾಷ್ಟ್ರಪತಿ ಭವನ ಹೇಳಿದೆ.