ಆಪರೇಷನ್ ಸಿಂಧೂರ್ | ಭಾರತವು ಆತ್ಮರಕ್ಷಣೆಯ ಹಕ್ಕು ಚಲಾಯಿಸಿದೆ: ಶಶಿ ತರೂರ್
ಕೊಲಂಬಿಯಾ ಸರಕಾರದ ಹೇಳಿಕೆಯಿಂದ ನಿರಾಶೆ

ಶಶಿ ತರೂರ್ | PTI
ಹೊಸದಿಲ್ಲಿ: ಭಯೋತ್ಪಾದನೆಯೊಂದಿಗೆ ಪಾಕಿಸ್ತಾನದ ಸಂಬಂಧಗಳನ್ನು ಬಯಲಿಗೆಳೆಯಲು ಐದು ದೇಶಗಳಿಗೆ ಸರ್ವಪಕ್ಷ ನಿಯೋಗದ ನೇತೃತ್ವವನ್ನು ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ‘ಆಪರೇಷನ್ ಸಿಂಧೂರ್’ ನ ಬಳಿಕ ಕೊಲಂಬಿಯಾ ಸರಕಾರದ ಹೇಳಿಕೆಗಳ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
‘ಆಪರೇಷನ್ ಸಿಂಧೂರ್’ದಲ್ಲಿ ಪಾಕಿಸ್ತಾನದಲ್ಲಿ ಜೀವಹಾನಿಗೆ ಕೊಲಂಬಿಯಾ ಸರಕಾರ ಸಂತಾಪವನ್ನು ವ್ಯಕ್ತಪಡಿಸಿತ್ತು.
ಕೊಲಂಬಿಯಾದ ರಾಜಧಾನಿ ಬೊಗೋಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್,‘ದೇಶವು ಭಯೋತ್ಪಾದನೆಯ ಸಂತ್ರಸ್ತರ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಬೇಕಿತ್ತು. ತಿಳುವಳಿಕೆಯನ್ನು ಮೂಡಿಸಲು ನಾವು ಇಲ್ಲಿದ್ದೇವೆ. ಕೊಲಂಬಿಯಾ ಆ ಹೇಳಿಕೆಯನ್ನು ನೀಡಿದ್ದಾಗ ಅದು ಬಹುಶಃ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರಲಿಲ್ಲ ಎಂದು ನಾವು ಭಾವಿಸಿದ್ದೇವೆ. ತಿಳುವಳಿಕೆಯು ನಮಗೆ ಅತ್ಯಂತ ಮುಖ್ಯವಾಗಿದೆ’ ಎಂದು ಹೇಳಿದರು.
‘ಭಯೋತ್ಪಾದಕರನ್ನು ಕಳುಹಿಸುವವರು ಮತ್ತು ಅವರನ್ನು ಪ್ರತಿರೋಧಿಸುವವರ ನಡುವೆ ಯಾವುದೇ ಸಮಾನತೆ ಸಾಧ್ಯವಿಲ್ಲ ಎಂದು ನಾವು ಕೊಲಂಬಿಯಾದಲ್ಲಿಯ ನಮ್ಮ ಸ್ನೇಹಿತರಿಗೆ ಹೇಳುತ್ತಿದ್ದೇವೆ. ದಾಳಿಯನ್ನು ನಡೆಸುವವರು ಮತ್ತು ತಮ್ಮ ದೇಶವನ್ನು ರಕ್ಷಿಸುವವರ ನಡುವೆ ಯಾವುದೇ ಸಮಾನತೆಯಿರಲು ಸಾಧ್ಯವಿಲ್ಲ. ನಾವು ಆತ್ಮರಕ್ಷಣೆಯ ನಮ್ಮ ಹಕ್ಕನ್ನು ಮಾತ್ರ ಚಲಾಯಿಸುತ್ತಿದ್ದೇವೆ’ ಎಂದು ಹೇಳಿದ ತರೂರ್,‘ಆಪರೇಷನ್ ಸಿಂಧೂರ್’ ಮತ್ತು ಮಿಲಿಟರಿ ಪ್ರತಿಕ್ರಿಯೆಯನ್ನು ಅಗತ್ಯವಾಗಿಸಿದ ಸಂದರ್ಭಗಳ ಕುರಿತು ಯಾವುದೇ ತಪ್ಪುತಿಳುವಳಿಕೆಯನ್ನು ಹೋಗಲಾಡಿಸಲು ಸರ್ವಪಕ್ಷ ನಿಯೋಗವಿಲ್ಲಿದೆ ಎಂದರು.
ತರೂರ್ ನೇತೃತ್ವದ ನಿಯೋಗವು ಗುರುವಾರ ಕೊಲಂಬಿಯಾ ತಲುಪಿದ್ದು, ಆ ದೇಶಕ್ಕೆ ಭಾರತದ ರಾಯಭಾರಿಯಾಗಿರುವ ವನಲಾಲ್ಹುಮಾ ಅದನ್ನು ಬರಮಾಡಿಕೊಂಡರು. ನಿಯೋಗವು ಅಲ್ಲಿಯ ಸಂಸತ್ ಸದಸ್ಯರು, ಸಚಿವರು ಹಾಗೂ ಚಿಂತನ ಚಾವಡಿಗಳು ಮತ್ತು ಮಾಧ್ಯಮ ಪ್ರಮುಖರೊಂದಿಗೆ ಸಂವಾದಗಳನ್ನು ಆರಂಭಿಸಿದೆ.
ತರೂರ್ ತಂಡವು ಸಂಸದರಾದ ಸರ್ಫಾಜ್ ಅಹ್ಮದ್(ಜೆಎಂಎಂ), ಜಿ.ಎಂ.ಹರೀಶ್ ಬಾಲಯೋಗಿ(ಟಿಡಿಪಿ),ಶಶಾಂಕ್ ಮಣಿ ತ್ರಿಪಾಠಿ(ಬಿಜೆಪಿ),ಭುವನೇಶ್ವರ್ ಕಲಿಟಾ(ಬಿಜೆಪಿ),ಮಿಲಿಂದ್ ದೇವರಾ(ಶಿವಸೇನೆ),ತೇಜಸ್ವಿ ಸೂರ್ಯ(ಬಿಜೆಪಿ) ಮತ್ತು ಅಮೆರಿಕಕ್ಕೆ ಭಾರತದ ಮಾಜಿ ರಾಯಭಾರಿ ತರಣಜಿತ ಸಿಂಗ್ ಸಂಧು ಅವರನ್ನು ಒಳಗೊಂಡಿದೆ.







