ಮಹಿಳೆಯರ ಸಿಂಧೂರ ಅಳಿಸಿರುವಾಗ ‘ಆಪರೇಷನ್ ಸಿಂಧೂರ’ ಹೆಸರಿಟ್ಟಿದ್ದೇಕೆ?: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಕಿಡಿ

ಜಯಾ ಬಚ್ಚನ್ | PTI
ಹೊಸದಿಲ್ಲಿ,ಜು.31: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹಲವು ಮಹಿಳೆಯರು ವಿಧವೆಯರಾದರು, ವಾಸ್ತವದಲ್ಲಿ ತಮ್ಮ ಸಿಂಧೂರವನ್ನು ಕಳೆದುಕೊಂಡರು. ಹೀಗಿದ್ದೂ ಪ್ರತೀಕಾರ ಕ್ರಮಕ್ಕೆ ‘ಆಪರೇಷನ್ ಸಿಂಧೂರ’ ಎಂಬ ಹೆಸರಿಟ್ಟಿದ್ದೇಕೆ ಎಂದು ಗುರುವಾರ ರಾಜ್ಯಸಭೆಯಲ್ಲಿ ಪ್ರಶ್ನಿಸುವ ಮೂಲಕ ಎಸ್ಪಿ ಸಂಸದೆ ಜಯಾ ಬಚ್ಚನ್ ಅವರು ವಿವಾದವನ್ನು ಸೃಷ್ಟಿಸಿದರು.
ರಾಜ್ಯಸಭೆಯಲ್ಲಿ ಪಹಲ್ಗಾಮ್ ದಾಳಿ ಮತ್ತು ನಂತರದ ಮಿಲಿಟರಿ ಕಾರ್ಯಾಚರಣೆ ಕುರಿತು ಚರ್ಚೆಯಲ್ಲಿ ಭಾಗಿಯಾದ ಬಚ್ಚನ್ ಎ.22ರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ಜನರ ಕುಟುಂಬಗಳಿಗೆ ಸಂತಾಪ ಸೂಚಿಸುವ ಮೂಲಕ ತನ್ನ ಮಾತನ್ನು ಆರಂಭಿಸಿದರು.
‘ನೀವು ದೊಡ್ಡ ಬರಹಗಾರರನ್ನು ನೇಮಿಸಿಕೊಂಡಿದ್ದೀರಿ, ಅದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನೀವು ಅಲಂಕಾರಿಕ ಹೆಸರುಗಳನ್ನು ನೀಡುತ್ತೀರಿ. ಕಾರ್ಯಾಚರಣೆಗೆ ನೀವು ‘ಸಿಂಧೂರ’ ಎಂದು ಏಕೆ ಹೆಸರಿಟ್ಟಿದ್ದೀರಿ? ದಾಳಿಯಲ್ಲಿ ಕೊಲ್ಲಲ್ಪಟ್ಟವರ ಪತ್ನಿಯರ ಸಿಂಧೂರ ಅಳಿಸಿಹೋಗಿದೆ ’ಎಂದು ಆಡಳಿತ ಪಕ್ಷದ ಸದಸ್ಯರತ್ತ ಕಿಡಿಕಾರಿದರು.
370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಸರಕಾರದ ಹೇಳಿಕೆಗಳನ್ನು ಟೀಕಿಸಿದ ಅವರು,ಶಾಂತಿ ಮತ್ತು ಸುರಕ್ಷತೆಯ ಭರವಸೆಗಳನ್ನು ಪ್ರಶ್ನಿಸಿದರು.
ಜಮ್ಮುಕಾಶ್ಮೀರದಲ್ಲಿ ವಿಧಿ 370ರ ರದ್ದತಿಯ ಬಳಿಕ ಭಯೋತ್ಪಾದನೆ ಅಂತ್ಯಗೊಳ್ಳುತ್ತದೆ ಎಂದು ಸರಕಾರವು ಬಡಾಯಿ ಕೊಚ್ಚಿಕೊಂಡಿತ್ತು. ಅದನ್ನು ನಂಬಿ ಪ್ರವಾಸಿಗಳು ಅಲ್ಲಿಗೆ ಹೋಗಿದ್ದರು. ಅವರ ಗತಿ ಏನಾಯಿತು? ಜನರಲ್ಲಿ ಮೂಡಿಸಿದ್ದ ಭರವಸೆ ಮತ್ತು ನಂಬಿಕೆಯನ್ನು ನೀವು ನಾಶಗೊಳಿಸಿದ್ದೀರಿ. ಆ ಕುಟುಂಬಗಳು ನಿಮ್ಮನ್ನೆಂದಿಗೂ ಕ್ಷಮಿಸುವುದಿಲ್ಲ. ಆ ಕುಟುಂಬಗಳ ಕ್ಷಮೆ ಯಾಚಿಸುವ ಮುಖವೂ ನಿಮಗೆ ಉಳಿದಿಲ್ಲ ಎಂದು ಬಚ್ಚನ್ ಗುಡುಗಿದರು.
ಸರಕಾರದಲ್ಲಿ ವಿನಮ್ರತೆಯ ಕೊರತೆಯನ್ನು ಟೀಕಿಸಿದ ಅವರು,ಅಧಿಕಾರದಲ್ಲಿ ವಿನಮ್ರತೆ ಬಹಳ ಮುಖ್ಯ. ಬಾಂಬ್ ಗಳು ಮತ್ತು ಶಸ್ತ್ರಾಸ್ತ್ರಗಳು ಮೂಲಭೂತ ಮಾನವೀಯತೆಗೆ ಪರ್ಯಾಯವಲ್ಲ. ರಕ್ಷಣಾ ಸಚಿವರು ನಾವು ಸ್ವಾವಲಂಬಿಗಳು,ನಾವು ಅದನ್ನು,ಇದನ್ನು ತಯಾರಿಸುತ್ತೇವೆ ಎಂದು ಹೇಳಿಕೊಂಡರು. ಕೇವಲ 25-26 ಜನರನ್ನೂ ಉಳಿಸಲು ನಿಮಗೆ ಸಾಧ್ಯವಾಗದಿದ್ದಾಗ ಇದಕ್ಕೇನು ಅರ್ಥ? ಬಾಂಬ್ ಗಳು ನೆರವಾಗುವುದಿಲ್ಲ,ಮೂಲಭೂತ ಮಾನವೀಯತೆಯ ಅಗತ್ಯವಿದೆ ಎಂದರು.
ಬಚ್ಚನ್ ಭಾಷಣಕ್ಕೆ ಆಡಳಿತ ಪಕ್ಷದ ಸದಸ್ಯರು ಅಡ್ಡಿಪಡಿಸುತ್ತಲೇ ಇದ್ದು, ಒಂದು ಹಂತದಲ್ಲಿ ತೀವ್ರ ಕೋಪಗೊಂಡಿದ್ದ ಅವರು, ‘ಒಂದೇ ನೀವು ಮಾತನಾಡಿ ಅಥವಾ ನಾನು ಮಾತನಾಡುತ್ತೇನೆ. ನೀವು ಮಾತನಾಡುವಾಗ ನಾನು ಅಡ್ಡಿಪಡಿಸುವುದಿಲ್ಲ. ಓರ್ವ ಮಹಿಳೆ ಮಾತನಾಡುವಾಗ ನಾನೆಂದಿಗೂ ಅಡ್ಡಿಯನ್ನುಂಟು ಮಾಡುವುದಿಲ್ಲ. ಹೀಗಾಗಿ ದಯವಿಟ್ಟು ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ’ ಎಂದು ಕಿಡಿ ಕಾರಿದರು.
ತನ್ನ ಪಕ್ಕದಲ್ಲಿ ಕುಳಿತಿದ್ದ ಶಿವಸೇನೆ(ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ತನ್ನನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ ಕೆಂಡಾಮಂಡಲಗೊಂಡ ಬಚ್ಚನ್ ‘ನೀವು ನನ್ನನ್ನು ನಿಯಂತ್ರಿಸಬೇಡಿ’ ಎಂದು ಗುಡುಗಿದರು. ಇದಕ್ಕೆ ಚತುರ್ವೇದಿ ನಕ್ಕು ಸುಮ್ಮನಾದರು. ಈ ಸಂದರ್ಭದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೀಘ್ರ ವೈರಲ್ ಕೂಡ ಆಯಿತು.
ಭಾವನಾತ್ಮಕ ಮನವಿಯೊಂದಿಗೆ ತನ್ನ ಭಾಷಣವನ್ನು ಮುಂದುವರಿಸಿದ ಬಚ್ಚನ್, ತಮ್ಮನ್ನು ರಕ್ಷಿಸುತ್ತಾರೆ ಎಂಬ ಭರವಸೆಯೊಂದಿಗೆ ನಿಮಗೆ ಈ ಸ್ಥಾನವನ್ನು ಮತ್ತು ಅಧಿಕಾರವನ್ನು ನೀಡಿರುವ ಜನರತ್ತ ವಿನಮ್ರರಾಗಿ, ಅವರ ಬಗ್ಗೆ ದಯೆಯಿರಲಿ, ಅವರನ್ನು ರಕ್ಷಿಸಿ. ಅವರ ಕ್ಷಮೆಯನ್ನು ಕೋರಿ ಎಂದರು.
ಟಿಎಂಸಿ ನಾಯಕ ಡೆರೆಕ್ ಒ‘ಬ್ರಿಯಾನ್ ಅವರನ್ನು ಉಲ್ಲೇಖಿಸಿದ ಬಚ್ಚನ್, ಡೆರೆಕ್ ಒಳ್ಳೆಯ ಮಾತನ್ನು ಹೇಳಿದ್ದಾರೆ-ವಾದವು ದುರ್ಬಲವಾದಷ್ಟೂ ದೇಹಭಾಷೆಯು ಹೆಚ್ಚು ಆಕ್ರಮಣಕಾರಿಯಾಗುತ್ತದೆ ಎಂದರು.







