‘ಆಪರೇಷನ್ ಸಿಂಧೂರ್’ ಹಿನ್ನೆಲೆ: ಭಾರತದ ಹಲವು ವಿಮಾನಗಳ ಹಾರಾಟ ರದ್ದು

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀಲರದ ಪಹಲ್ಗಾಮ್ ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮಧ್ಯರಾತ್ರಿ ಭಾರತ ಸೇನೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿದ್ದು, ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಹಲವು ವಿಮಾನ ಹಾರಾಟ ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ವಾಯು ಮಾರ್ಗಗಳಲ್ಲೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಒಂಬತ್ತು ಭಯೋತ್ಪಾದಕ ನೆಲೆಗಳನ್ನು ನಾಶಗೊಳಿಸಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಿಗೇ, ಭಾರತದಲ್ಲಿನ ವಾಯು ಪ್ರದೇಶದಲ್ಲಿನ ನಾಗರಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಗಲಿದೆ ಎಂದು ಬುಧವಾರ (ಮೇ 7) ಇಂಡಿಗೋ ಏರ್ ಲೈನ್ಸ್ ಪ್ರಕಟಿಸಿದೆ.
ಕೇಂದ್ರದ ಸೂಚನೆ ಸ್ವೀಕರಿಸುವವರೆಗೆ ದೇಶದ ಹಲವು ಭಾಗಗಳಲ್ಲಿ ವಿಮಾನ ಯಾನ ಸೇವೆಯನ್ನು ರದ್ದುಗೊಳಿಸಲಾಗಿದೆ. ಅದರಂತೆ, ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ, ಧರ್ಮಶಾಲಾ ಮತ್ತು ಬಿಕಾನೇರ್ ಗೆ ನಿರ್ಗಮಿಸುವ ಮತ್ತು ಆಗಮಿಸುವ ವಿಮಾನಗಳ ಹಾರಾಟ ವಿಳಂಬಗೊಳ್ಳಬಹುದು ಅಥವಾ ರದ್ದುಗೊಳ್ಳಬಹುದು ಎಂದು ಇಂಡಿಗೊ ಏರ್ ಲೈನ್ಸ್ ವಿಮಾನ ಯಾನ ಸಂಸ್ಥೆ ಖಚಿತ ಪಡಿಸಿದೆ. ಉತ್ತರ ಭಾರತದ ಕೆಲವು ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆ ಹೇಳಿದೆ ಎಂದು ವರದಿಯಾಗಿದೆ.







