ಮೇಧಾ ಪಾಟ್ಕರ್ ಗೆ ಆಮಂತ್ರಣ ನೀಡಿದ್ದಕ್ಕೆ ವಿರೋಧ | ಭೂಸ್ವಾಧೀನ ಕಾಯ್ದೆ ಸಂಸದೀಯ ಸಮಿತಿಯ ಸಭೆಯನ್ನು ಬಲವಂತವಾಗಿ ರದ್ದುಗೊಳಿಸಿದ ಬಿಜೆಪಿ ಸಂಸದರು

PC : theprint.in
ಹೊಸದಿಲ್ಲಿ: ಭೂಸ್ವಾಧೀನ ಕಾಯ್ದೆ ಸಂಸದೀಯ ಸಮಿತಿಯ ಸಭೆಗೆ ತಜ್ಞರೆಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಆಮಂತ್ರಿಸಿರುವುದನ್ನು ವಿರೋಧಿಸಿ, ಮಂಗಳವಾರ ಬಿಜೆಪಿ ಸಂಸದರು ಸಭಾತ್ಯಾಗ ಮಾಡಿದ ಘಟನೆ ನಡೆದಿದೆ. ಈ ವೇಳೆ ಬಿಜೆಪಿಯ ಸಂಸದರು ಮೇಧಾ ಪಾಟ್ಕರ್ ಓರ್ವ ದೇಶ ದ್ರೋಹಿ, ಅಭಿವೃದ್ಧಿ ವಿರೋಧಿ ಎಂದು ದೂಷಿಸಿದರು ಎಂದು ತಿಳಿದು ಬಂದಿದೆ. ಈ ಘಟನೆ ನಡೆದಾಗ, ಮೇಧಾ ಪಾಟ್ಕರ್ ಸಭಾ ಕೊಠಡಿಯ ಹೊರಗೆ ಕಾಯುತ್ತಿದ್ದರು ಎನ್ನಲಾಗಿದೆ.
ಇದರೊಂದಿಗೆ, ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್, ವಕೀಲೆ ಆರಾಧನಾ ಭಾರ್ಗವ ಹಾಗೂ ಇನ್ನಿತರ ತಜ್ಞರು, ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ದೃಷ್ಟಿಕೋನ ಹಂಚಿಕೊಳ್ಳುವಂತೆ ಕಾಂಗ್ರೆಸ್ ಸಂಸದ ಸಪ್ತಗಿರಿ ಉಲಾಕಾ ಅಧ್ಯಕ್ಷತೆಯ ಸಂಸದೀಯ ಸಮಿತಿಯು ಸಭೆಗೆ ಆಮಂತ್ರಿಸಿತ್ತು ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಆದರೆ, ಸಭೆ ಆರಂಭಗೊಳ್ಳುವುದಕ್ಕೂ ಮುನ್ನವೇ, ಬಿಜೆಪಿ ಸಂಸದರು ಮೇಧಾ ಪಾಟ್ಕರ್ ರನ್ನು ದೇಶ ದ್ರೋಹಿ ಎಂದು ಒಗ್ಗಟ್ಟಾಗಿ ದೂಷಿಸಲು ಪ್ರಾರಂಭಿಸಿದರು. ಅವರು ರಾಜ್ಯಾದ್ಯಂತ ಅಭಿವೃದ್ಧಿ ಕೆಲಸಗಳಿಗೆ ತಡೆಯೊಡ್ಡುತ್ತಿದ್ದಾರೆ ಎಂದೂ ಅವರು ಆರೋಪಿಸಿದರು. ಈ ವೇಳೆ, ಒಂದು ವೇಳೆ ಮೇಧಾ ಪಾಟ್ಕರ್ ರನ್ನು ಈ ಸಭೆಗೆ ಆಮಂತ್ರಿಸುವುದಾದರೆ, ಸಮಿತಿಯು ಪಾಕಿಸ್ತಾನದ ಪ್ರಧಾನಿಯನ್ನೂ ಸಭೆಗೆ ಆಮಂತ್ರಿಸಬಹುದು ಎಂದೂ ಓರ್ವ ಬಿಜೆಪಿ ಸಂಸದ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಅವರೆಲ್ಲ ಸಭಾತ್ಯಾಗ ಮಾಡಿದರು” ಎಂದು ಹೆಸರೇಳಲಿಚ್ಛಿಸದ ವಿರೋಧ ಪಕ್ಷದ ಸಂಸದರೊಬ್ಬರು ತಿಳಿಸಿದ್ದಾರೆ.
ಬಿಜೆಪಿಯ ಸಂಸದರು ಸಭಾತ್ಯಾಗ ಮಾಡಿದ ಬೆನ್ನಿಗೇ, ಧ್ವನಿಮತವಿಲ್ಲದ ಕಾರಣಕ್ಕೆ ಸಭೆಯನ್ನು ರದ್ದುಗೊಳಿಸಲಾಯಿತು ಎಂದು ಇಬ್ಬರು ವಿರೋಧ ಪಕ್ಷಗಳ ಸಂಸದರು ತಿಳಿಸಿದ್ದಾರೆ. ಲೋಕಸಭಾ ಕಾರ್ಯಕಲಾಪ ವಿಧಾನಗಳು ಮತ್ತು ನಡತೆಯ ನಿಯಮಾವಳಿಗಳ ಪ್ರಕಾರ, ಸಮಿತಿಯ ಒಟ್ಟು ಸದಸ್ಯ ಬಲದ ಸರಿಸುಮಾರು ಮೂರನೆಯ ಒಂದರಷ್ಟು ಸದಸ್ಯರು ಸಭೆಯಲ್ಲಿ ಹಾಜರಿರಬೇಕಾಗುತ್ತದೆ.
ಭೂಸ್ವಾಧೀನ ಕಾಯ್ದೆ ಸಂಸದೀಯ ಸಮಿತಿ 29 ಮಂದಿ ಸದಸ್ಯರನ್ನು ಹೊಂದಿದ್ದು, ಈ ಪೈಕಿ ಮಂಗಳವಾರ ನಡೆದ ಸಭೆಗೆ ಬಿಜೆಪಿಯ 11 ಸಂಸದರು ಸೇರಿದಂತೆ 17 ಮಂದಿ ಸಂಸದರು ಮಾತ್ರ ಹಾಜರಾಗಿದ್ದರು. ಸಭೆಯಿಂದ ಎಲ್ಲ 11 ಮಂದಿ ಬಿಜೆಪಿ ಸಂಸದರು ಸಭಾತ್ಯಾಗ ನಡೆಸಿದ್ದರಿಂದ, ಕೇವಲ ಆರು ಮಂದಿ ಸದಸ್ಯರು ಮಾತ್ರ ಸಭೆಯಲ್ಲಿ ಹಾಜರಿದ್ದರು. ಹೀಗಾಗಿ, ಧ್ವನಿಮತದ ಕೊರತೆಯ ಕಾರಣಕ್ಕೆ ಭೂಸ್ವಾಧೀನ ಕಾಯ್ದೆ ಸಂಸದೀಯ ಸಮಿತಿಯ ಮಂಗಳವಾರದ ಸಭೆಯನ್ನು ರದ್ದುಗೊಳಿಸಲಾಗಿದೆ.







