ಅನಿಲ್ ಅಂಬಾನಿಯ ಸಾಲ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಿದ್ದ ಆದೇಶ ಹಿಂಪಡೆದ ಕೆನರಾ ಬ್ಯಾಂಕ್

ಅನಿಲ್ ಅಂಬಾನಿ (Photo: PTI)
ಮುಂಬೈ: ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರಿಗೆ ಸಂಬಂಧಿಸಿದ ಸಂಸ್ಥೆಯ ಸಾಲ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಿದ್ದ ತನ್ನ ಆದೇಶವನ್ನು ಹಿಂದೆಗೆದುಕೊಂಡಿರುವುದಾಗಿ ಕೆನರಾ ಬ್ಯಾಂಕ್ ಗುರುವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಬ್ಯಾಂಕ್ ಮಾಹಿತಿ ನೀಡಿದ ಬಳಿಕ ಪೀಠವು ಬ್ಯಾಂಕಿನ ಆದೇಶವನ್ನು ಪ್ರಶ್ನಿಸಿ ಅನಿಲ್ ಅಂಬಾನಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿಗೊಳಿಸಿತು.
ಸಾಲ ಖಾತೆಯು ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಶನ್ಸ್ಗೆ ಸಂಬಂಧಿಸಿದ್ದು,ಅದು ಪ್ರಸ್ತುತ ದಿವಾಳಿತನ ಪ್ರಕ್ರಿಯೆಯಲ್ಲಿದೆ.
2017ರಲ್ಲಿ ಅವಧಿ ವಿಸ್ತರಿಸಲಾಗಿದ್ದ 1,050 ಕೋಟಿ ರೂ.ಗಳ ಸಾಲವನ್ನು ಇತರ ಹೊಣೆಗಾರಿಕೆಗಳನ್ನು ತೀರಿಸಲು ಗ್ರೂಪ್ ಕಂಪನಿಗೆ ವರ್ಗಾಯಿಸಿದ್ದು ಸೇರಿದಂತೆ ವಿವಿಧ ಕಾರಣಗಳಿಂದ ಬ್ಯಾಂಕು ನ.8, 2024ರಂದು ಸಾಲ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಿತ್ತು. ವಂಚನೆ ಖಾತೆಗಳಿಗೆ ಸಂಬಂಧಿಸಿದಂತೆ ಆರ್ಬಿಐನ ಸುತ್ತೋಲೆಗೆ ಅನುಗುಣವಾಗಿ ಬ್ಯಾಂಕು ಈ ಕ್ರಮವನ್ನು ಕೈಗೊಂಡಿತ್ತು.
ಈ ವರ್ಷದ ಫೆಬ್ರವರಿಯಲ್ಲಿ ಉಚ್ಚ ನ್ಯಾಯಾಲಯವು ಇಂತಹುದೇ ಕ್ರಮಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಬಾಕಿಯಿದ್ದಂತೆ ಸಂಬಂಧಿತ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿತ್ತು.
ಅಂಬಾನಿ ಕೆನರಾ ಬ್ಯಾಂಕಿನ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಸಾಲ ಖಾತೆಯನ್ನು ವಂಚನೆ ಎಂದು ವರ್ಗೀಕರಿಸುವ ಮುನ್ನ ಬ್ಯಾಂಕು ತನ್ನ ಅಹವಾಲನ್ನು ಆಲಿಸಿರಲಿಲ್ಲ ಎಂದು ವಾದಿಸಿದ್ದರು.







