"ಸಂಘಟನೆಯನ್ನು ಬಲಪಡಿಸಬೇಕು": ಆರೆಸ್ಸೆಸ್ಗೆ ಶ್ಲಾಘಿಸಿ ವಿವಾದಕ್ಕೀಡಾಗಿದ್ದ ದಿಗ್ವಿಜಯ ಸಿಂಗ್ಗೆ ಶಶಿ ತರೂರ್ ಬೆಂಬಲ

Photo| indiatoday
ಹೊಸದಿಲ್ಲಿ: RSS ಹಾಗೂ BJP ಸಂಘಟನಾ ಬಲವನ್ನು ಹೊಗಳಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಉಂಟಾದ ವಿವಾದದ ನಡುವೆಯೇ, ಕಾಂಗ್ರೆಸ್ ಸಂಸದ ಶಶಿ ತರೂರ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇದೇ ವೇಳೆ, ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಅವರು ಪರೋಕ್ಷವಾಗಿ ಬೆಂಬಲಿಸಿದ್ದಾರೆ.
ಕಾಂಗ್ರೆಸ್ನ 140ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿ ತರೂರ್, ದಿಗ್ವಿಜಯ ಸಿಂಗ್ ಅವರೊಂದಿಗೆ ನಡೆದ ಸಂವಹನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾವು ಸ್ನೇಹಿತರು, ಪರಸ್ಪರ ಸಂಭಾಷಣೆ ಸಹಜ, ಸಂಘಟನೆಯನ್ನು ಬಲಪಡಿಸಬೇಕೆಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಿದರು.
ಈ ದಿನವನ್ನು ಕಾಂಗ್ರೆಸ್ಗೆ ಮಹತ್ವದ ದಿನವೆಂದು ಬಣ್ಣಿಸಿದ ಶಶಿ ತರೂರ್, “ಪಕ್ಷದ ದೀರ್ಘ ಹಾಗೂ ಗಮನಾರ್ಹ ಇತಿಹಾಸವನ್ನು ಮತ್ತು ದೇಶಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಗಳನ್ನು ಹಿಂತಿರುಗಿ ನೋಡುವ ಸಂದರ್ಭ ಇದು” ಎಂದರು.
ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಳೆಯ ಛಾಯಾಚಿತ್ರದ ಬಳಿಕ ಈ ಚರ್ಚೆಗಳು ಆರಂಭವಾಗಿವೆ. ಆ ಚಿತ್ರದಲ್ಲಿ ನರೇಂದ್ರ ಮೋದಿ ಕಾರ್ಯಕರ್ತನಂತೆ ನೆಲದ ಮೇಲೆ ಕುಳಿತಿರುವುದು ಹಾಗೂ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಕುರ್ಚಿಯಲ್ಲಿ ಕುಳಿತಿರುವುದು ಕಂಡು ಬರುತ್ತದೆ. ಈ ಚಿತ್ರವನ್ನು ‘ಪ್ರಭಾವಶಾಲಿ’ ಎಂದು ವರ್ಣಿಸಿದ್ದ ಸಿಂಗ್, ಗುಜರಾತ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದನ್ನು ತೆಗೆಯಲಾಗಿದೆ ಎಂದು ಹೇಳಿದ್ದಾರೆ.
ಪೋಸ್ಟ್ ನಲ್ಲಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ RSSನ ಸಂಘಟನಾ ಬಲವನ್ನು ಉಲ್ಲೇಖಿಸಿರುವುದಾಗಿ ವ್ಯಾಖ್ಯಾನಿಸಲಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷದ ಒಳಗೂ ಹೊರಗೂ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದೇ ವೇಳೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ಸಂದರ್ಭದಲ್ಲೇ ಈ ವಿಚಾರ ಪ್ರಸ್ತಾಪವಾಗಿರುವುದು ಗಮನಸೆಳೆಯಿತು.
ಈ ಹೇಳಿಕೆಗಳ ಕುರಿತು ಬಿಜೆಪಿ, ಇದನ್ನು ಕಾಂಗ್ರೆಸ್ ನಾಯಕತ್ವದ ವಿರುದ್ಧದ “ಬಹಿರಂಗ ಭಿನ್ನಾಭಿಪ್ರಾಯ” ಎಂದು ಆರೋಪಿಸಿತು. ಆದರೆ, ಬಳಿಕ ಸ್ಪಷ್ಟನೆ ನೀಡಿದ ದಿಗ್ವಿಜಯ ಸಿಂಗ್, ನಾನು ಸಂಘಟನೆ ಮತ್ತು ಅದರ ಬಲದ ಬಗ್ಗೆ ಮಾತ್ರ ಮಾತನಾಡಿದ್ದು, ಬಿಜೆಪಿ ಅಥವಾ RSS ಕುರಿತು ಅಲ್ಲ ಎಂದು ತಿಳಿಸಿದರು. ಇಬ್ಬರ ವಿರುದ್ಧವೂ ತಮ್ಮ ನಿಲುವು ಅಚಲವಾಗಿದೆ ಎಂದು ಹೇಳಿದರು.







