200 ಸಸಿಗಳನ್ನು ನೆಡಬೇಕು ಎಂಬ ಶರತ್ತಿನೊಂದಿಗೆ ಕಳ್ಳತನದ ಅರೋಪಿಗೆ ಜಾಮೀನು ಮಂಜೂರು ಮಾಡಿದ ಒಡಿಶಾ ಹೈಕೋರ್ಟ್!

ಸಾಂದರ್ಭಿಕ ಚಿತ್ರ
ಕಟಕ್: ತನ್ನ ಗ್ರಾಮದ ಸುತ್ತಮುತ್ತ 200 ಸಸಿಗಳನ್ನು ನೆಡಬೇಕು ಹಾಗೂ ಅವುಗಳನ್ನು ಎರಡು ವರ್ಷಗಳ ಕಾಲ ನಿರ್ವಹಣೆ ಮಾಡಬೇಕು ಎಂಬ ಶರತ್ತಿನೊಂದಿಗೆ ಕಳ್ಳತನದ ಆರೋಪಿಯೊಬ್ಬನಿಗೆ ಒಡಿಶಾ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಗೆ ಜಾಮೀನು ಮಂಜೂರು ಮಾಡಲು ವಿಧಿಸಲಾಗಿರುವ ವಿವಿಧ ಶರತ್ತುಗಳ ಪೈಕಿ ಇದೂ ಒಂದಾಗಿದೆ.
ವಿದ್ಯುತ್ ಸರಬರಾಜು ಕಂಪನಿಯೊಂದರ ಸುಮಾರು 2 ಲಕ್ಷ ರೂ. ಮೌಲ್ಯದ ಕನಿಷ್ಠ ಆರು ವಿದ್ಯುತ್ ಕಂಬಗಳನ್ನು ಕದ್ದ ಆರೋಪದ ಮೇಲೆ ಕಳೆದ ವರ್ಷದ ಡಿಸೆಂಬರ್ 25ರಂದು ಕೊಲಬಿರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಝಾರ್ಸುಗುಡ ಜಿಲ್ಲೆಯ ನಿವಾಸಿ ಮಾನಸ್ ಅತಿಯ ಜಾಮೀನು ಅರ್ಜಿಯನ್ನು ಸೋಮವಾರ ನ್ಯಾ. ಎಸ್.ಕೆ.ಪಾಣಿಗ್ರಾಹಿ ಅಂಗೀಕರಿಸಿದರು.
ಆರೋಪಿ ಮಾನಸ್ ಅತಿಗೆ ಕೆಲವು ಶರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡುವಂತೆ ಕೆಳ ಹಂತದ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿತು.
ಪ್ರತಿ ಹದಿನೈದು ದಿನಕ್ಕೊಮ್ಮೆ ಪೊಲೀಸರೆದುರು ಹಾಜರಾಗಬೇಕು, ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಬಾರದು ಹಾಗೂ ಸಾಕ್ಷ್ಯಾಧಾರಗಳನ್ನು ತಿರುಚಬಾರದು ಎಂದೂ ಹೈಕೋರ್ಟ್ ಆರೋಪಿಗೆ ಸೂಚಿಸಿತು.
ಆರೋಪಿ ಅತಿಗೆ ಸಸಿಗಳನ್ನು ಪೂರೈಸುವಂತೆ ಜಿಲ್ಲಾ ನರ್ಸರಿಗೆ ಸೂಚಿಸಿದ ನ್ಯಾಯಾಲಯ, ಆತ ಸಸಿಯನ್ನು ನೆಡಲು ಜಾಗ ಗುರುತಿಸುವುದಕ್ಕೆ ನೆರವು ನೀಡುವಂತೆ ಕಂದಾಯ ಅಧಿಕಾರಿಗಳಿಗೂ ನಿರ್ದೇಶನ ನೀಡಿತು.
ಈ ಶರತ್ತುಗಳ ಪೈಕಿ ಯಾವುದೇ ಶರತ್ತನ್ನು ಉಲ್ಲಂಘಿಸಿದರೂ ಜಾಮೀನು ರದ್ದುಗೊಳ್ಳಲಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ► https://whatsapp.com/channel/0029VaA8ju86LwHn9OQpEq28