‘ಆಪರೇಷನ್ ಸಿಂಧೂರ’ದಲ್ಲಿ ನಮ್ಮ ತಯಾರಿಕೆಯ ಡ್ರೋನ್ಗಳು ಮುಂಚೂಣಿಯಲ್ಲಿದ್ದವು: ಗೌತಮ್ ಅದಾನಿ

ಗೌತಮ್ ಅದಾನಿ (Photo: PTI)
ಹೊಸದಿಲ್ಲಿ,ಜೂ.24: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ್ದ ‘ಆಪರೇಷನ್ ಸಿಂಧೂರ’ದಲ್ಲಿ ಅದಾನಿ ಸಮೂಹವು ತಯಾರಿಸಿದ್ದ ಡ್ರೋನ್ಗಳು ಮತ್ತು ಡ್ರೋನ್ ಪ್ರತಿಬಂಧಕ ವ್ಯವಸ್ಥೆಗಳು ಮುಂಚೂಣಿಯ ಪಾತ್ರವನ್ನು ವಹಿಸಿದ್ದವು ಎಂದು ಬಿಲಿಯಾಧೀಶ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಮಂಗಳವಾರ ಹೇಳಿದರು.
ಅದಾನಿ ಗ್ರೂಪ್ನ ವಾರ್ಷಿಕ ಶೇರುದಾರರ ಸಭೆಯಲ್ಲಿ ಮಾತನಾಡಿದ ಅವರು,‘ಆಪರೇಷನ್ ಸಿಂಧೂರ ಕರೆ ನೀಡಿತ್ತು ಮತ್ತು ನಾವು ಅದನ್ನು ಪಾಲಿಸಿದೆವು’ ಎಂದರು.
‘ಅದಾನಿ ಡಿಫೆನ್ಸ್ ತಯಾರಿಸಿದ್ದ ಡ್ರೋನ್ಗಳು ಆಗಸದಲ್ಲಿ ಕಣ್ಣುಗಳಾಗಿದ್ದವು ಮತ್ತು ದಾಳಿಯ ಖಡ್ಗಗಳಾಗಿದ್ದವು,ನಮ್ಮ ಡ್ರೋನ್ ಪ್ರತಿಬಂಧಕ ವ್ಯವಸ್ಥೆಗಳು ನಮ್ಮ ಪಡೆಗಳು ಮತ್ತು ನಾಗರಿಕರ ರಕ್ಷಣೆಗೆ ನೆರವಾಗಿದ್ದವು’ ಎಂದು ಅವರು ಹೇಳಿದರು.
ಅದಾನಿ ಡಿಫೆನ್ಸ್ ಶೇ.26ರಷ್ಟು ಒಡೆತನವನ್ನು ಹೊಂದಿರುವ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಇಸ್ರೇಲ್ನ ಎಲ್ಬಿಟ್ ಸಿಸ್ಟಮ್ಸ್ನ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಿರುವ ಕಾಮಿಕೇಜ್ ಡ್ರೋನ್ಗಳು 5ರಿಂದ 10 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲವು ಹಾಗೂ 100 ಕೀ.ಮೀ.ವರೆಗೆ ಕಡಿಮೆ ಎತ್ತರದಲ್ಲಿ ಮೌನವಾಗಿ ಹಾರುತ್ತವೆ ಮತ್ತು ಗುರಿಗಳ ಮೇಲೆ ನಿಖರ ದಾಳಿಯನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿವೆ.
‘ನಾವು ಸುರಕ್ಷಿತ ವಲಯಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಎಲ್ಲಿ ಮುಖ್ಯವೋ ಅಲ್ಲಿ,ಭಾರತಕ್ಕೆ ನಾವು ಎಲ್ಲಿ ಹೆಚ್ಚು ಅಗತ್ಯವಾಗಿರುತ್ತೇವೆಯೋ ಅಲ್ಲಿ ನಾವು ಕಾರ್ಯ ನಿರ್ವಹಿಸುತ್ತೇವೆ’ ಎಂದು ಹೇಳಿದರು.
ಗಡಿಗಳನ್ನು ಕಾಯುತ್ತಿರುವ ಧೀರಯೋಧರಿಗೆ ವಂದನೆಗಳನ್ನು ಸಲ್ಲಿಸುವ ಮೂಲಕ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತನ್ನ ಭಾಷಣವನ್ನು ಆರಂಭಿಸಿದ ಅದಾನಿ,‘ಈ ವರ್ಷ ಆಪರೇಷನ್ ಸಿಂಧೂರ ಸಮಯದಲ್ಲಿ ನಮ್ಮ ಸಶಸ್ತ್ರ ಪಡೆಗಳ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳು ಅಸಾಮಾನ್ಯ ಶೌರ್ಯವನ್ನು ಮೆರೆದಿದ್ದಾರೆ. ಪ್ರಸಿದ್ಧಿಗಾಗಿ ಅಥವಾ ಪದಕಗಳಿಗಾಗಿ ಅಲ್ಲ,ಆದರೆ ಕರ್ತವ್ಯಕ್ಕಾಗಿ. ಶಾಂತಿಯು ಎಂದೂ ಉಚಿತವಾಗಿ ಸಿಗುವುದಿಲ್ಲ,ಅದನ್ನು ಗಳಿಸಬೇಕಾಗುತ್ತದೆ ಎನ್ನುವುದನ್ನು ನಮ್ಮ ಸಶಸ್ತ್ರ ಪಡೆಗಳ ಧೈರ್ಯವು ನಮಗೆ ಮರುನೆನಪಿಸಿದೆ. ನಮ್ಮ ಸ್ವಾತಂತ್ರ್ಯವು ನಮ್ಮನ್ನು ರಕ್ಷಿಸುವವರ ಹೆಗಲುಗಳ ಮೇಲೆ ದೃಢವಾಗಿ ನಿಂತಿದೆ’ ಎಂದು ಹೇಳಿದರು.
ಭಾರತವು ಶಾಂತಿಯ ಮೌಲ್ಯವನ್ನು ಅರಿತಿದೆ. ಆದರೆ ತನ್ನನ್ನು ಬೆದರಿಸಲು ಯಾರಾದರೂ ಧೈರ್ಯ ಮಾಡಿದರೆ ಅವರಿಗೆ ಅವರದೇ ಭಾಷೆಯಲ್ಲಿ ಹೇಗೆ ಉತ್ತರಿಸಬೇಕು ಎನ್ನುವುದು ಅದಕ್ಕೆ ಗೊತ್ತಿದೆ ಎಂದು ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿ ಅದಾನಿ ಹೇಳಿದರು.
‘ಕಳೆದ 12 ತಿಂಗಳುಗಳಲ್ಲಿ ನಮ್ಮ ಸುತ್ತಲಿನ ಜಗತ್ತು ನಾಟಕೀಯವಾಗಿ ಬದಲಾಗಿದೆ’ಎಂದ ಅವರು,60ಕ್ಕೂ ಅಧಿಕ ದೇಶಗಳಲ್ಲಿ ಚುನಾವಣೆಗಳು ನಡೆದಿವೆ,ಗಡಿಗಳು ಮರುರೂಪಿಸಲ್ಪಟ್ಟಿವೆ, ಮೈತ್ರಿಗಳು ಸತ್ವಪರೀಕ್ಷೆಗೆ ಒಳಗಾಗಿವೆ ಮತ್ತು ಆರ್ಥಿಕತೆಗಳು ಅಲುಗಾಡಿವೆ. ಮಧ್ಯಪ್ರಾಚ್ಯದಲ್ಲಿ ಇಂಧನ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದ ಮೇಲೆ ಕರಿನೆರಳು ಮುಂದುವರಿದಿದೆ. ಯುರೋಪ್ನಲ್ಲಿ ಆರ್ಥಿಕ ವಿಶ್ವಾಸವು ಮುಗ್ಗರಿಸಿದೆ. ಅಮೆರಿಕಾ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಆದಾಗ್ಯೂಇವೆಲ್ಲ ಗೊಂದಲಗಳ ನಡುವೆಯೂ ಭಾರತವು ಪ್ರತ್ಯೇಕವಾಗಿ ನಿಂತಿದೆ ಮತ್ತು ಇತರ ಯಾವುದೇ ಪ್ರಮುಖ ದೇಶಕ್ಕಿಂತ ಹೆಚ್ಚು ವೇಗವಾಗಿ ಬೆಳೆದಿದೆ ಎಂದು ಹೇಳಿದರು.







