ಸರಕಾರದ ವಿರುದ್ಧ ಆದೇಶ ನೀಡದಿದ್ದರೆ ಅಂಥವರು ಸ್ವತಂತ್ರರಲ್ಲ ಎಂಬುದು ಸರಿಯಲ್ಲ: ನಿರ್ಗಮಿತ ಸಿಜೆಐ ಗವಾಯಿ

ಬಿ.ಆರ್.ಗವಾಯಿ | PC : PTI
ಹೊಸದಿಲ್ಲಿ: ಯಾರಾದರೂ ನ್ಯಾಯಾಧೀಶರು ಸರಕಾರದ ವಿರುದ್ಧ ಆದೇಶ ನೀಡದಿದ್ದರೆ, ಅಂಥವರು ಸ್ವತಂತ್ರರಲ್ಲ ಎಂಬ ಜನಪ್ರಿಯ ಪರಿಕಲ್ಪನೆಯನ್ನು ರವಿವಾರ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಇದೊಂದು ತಪ್ಪು ಧೋರಣೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಸೇವೆಯ ಕೊನೆಯ ದಿನವಾದ ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಲ ನ್ಯಾಯಮೂರ್ತಿ ಗವಾಯಿ, “ನೀವು ಸರಕಾರದ ವಿರುದ್ಧ ನಿರ್ಣಯ ಕೈಗೊಳ್ಳದಿದ್ದರೆ, ನೀವು ಸ್ವತಂತ್ರ ನ್ಯಾಯಾಧೀಶರಲ್ಲ ಎಂಬುದು ಸರಿಯಲ್ಲ. ಅರ್ಜಿದಾರರು ಸರಕಾರವೊ ಅಥವಾ ಖಾಸಗಿ ನಾಗರಿಕರೊ ಎಂಬುದರ ಮೇಲೆ ನೀವು ನಿರ್ಧರಿಸುವುದಿಲ್ಲ. ನಿಮ್ಮ ಮುಂದಿರುವ ದಾಖಲೆಗಳನ್ನು ಆಧರಿಸಿ ನಿರ್ಣಯ ಕೈಗೊಳ್ಳುತ್ತೀರಿ” ಎಂದು ಅವರು ಹೇಳಿದ್ದಾರೆ.
ಇದು ತಪ್ಪು ಧೋರಣೆ ಎಂದು ಅಭಿಪ್ರಾಯಪಟ್ಟ ಗವಾಯಿ, ಪ್ರಚಲಿತ ಕಾಲಘಟ್ಟದಲ್ಲಿ ಸರಕಾರದ ವಿರುದ್ಧ ನಿರ್ಣಯಗಳನ್ನು ಕೈಗೊಳ್ಳುವವರನ್ನು ಮಾತ್ರ ಸ್ವತಂತ್ರ ನ್ಯಾಯಾಧೀಶರು ಎಂದು ಭಾವಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಇದಕ್ಕಿಂತ ಹೆಚ್ಚಾಗಿ, ನ್ಯಾಯಾಂಗ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ನಾವು ಸರಕಾರವನ್ನೇ ಅವಲಂಬಿಸಬೇಕಿದೆ. ನಮಗೆ (ನ್ಯಾಯಾಂಗಕ್ಕೆ) ಆರ್ಥಿಕ ವೆಚ್ಚದ ಅಧಿಕಾರವಿಲ್ಲ. ಹೀಗಾಗಿ ಆಗಾಗ ಘರ್ಷಣೆ ನಡೆಯುತ್ತಿರುತ್ತದೆ. ಆದರೆ, ನಿರಂತರವಾಗಿ ಘರ್ಷಣೆ ನಡೆಯುತ್ತಿರಬೇಕು ಎಂದು ನಾನು ಭಾವಿಸುವುದಿಲ್ಲ. ಇದು ಅನಗತ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ” ಎಂದೂ ಅವರು ಹೇಳಿದ್ದಾರೆ.
ಕೇಂದ್ರ ಸರಕಾರದ ಸಹಕಾರವನ್ನು ಉಲ್ಲೇಖಿಸಿದ ನ್ಯಾ. ಗವಾಯಿ, ನನ್ನ ಅವಧಿಯಲ್ಲಿ ಕೊಲಿಜಿಯಂ ಶಿಫಾರಸು ಮಾಡಿದ ಬಹುತೇಕ ಎಲ್ಲ ನ್ಯಾಯಾಧೀಶರ ಹೆಸರುಗಳನ್ನು ಸರಕಾರ ಅನುಮೋದಿಸಿದೆ ಎಂದು ಹೇಳಿದ್ದಾರೆ.
“ಎಲ್ಲ ಹೈಕೋರ್ಟ್ ಗಳಲ್ಲಿ ಸುಮಾರು 107 ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ನಾನು ಬಾಂಬೆ ಹೈಕೋರ್ಟ್ ಗೆ 14 ನ್ಯಾಯಾಧೀಶರು ಹಾಗೂ ಮಧ್ಯಪ್ರದೇಶ ಹೈಕೋರ್ಟ್ ಗೆ 12 ನ್ಯಾಯಾಧೀಶರನ್ನು ನೇಮಕ ಮಾಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.







