ಸಹೋದ್ಯೋಗಿ ವಜಾ ವಿರುದ್ಧ ಆಕ್ರೋಶ: ಹಿಮಾಚಲ ವೈದ್ಯರ ಅನಿರ್ದಿಷ್ಟ ಮುಷ್ಕರ

PC: x.com/I_love_himachal
ಶಿಮ್ಲಾ: ರೋಗಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಸರ್ಕಾರಿ ವೈದ್ಯರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಪ್ರತಿಭಟಿಸಿ, ಶನಿವಾರ ಬೆಳಿಗ್ಗೆ 9.30ರಿಂದ ಅನಿರ್ದಿಷ್ಟಾವಧಿಯ ಮುಷ್ಕರ ಆರಂಭಿಸಲು ಹಿಮಾಚಲ ಪ್ರದೇಶದ ಇಂದಿರಾಗಾಂಧಿ ಮೆಡಿಕಲ್ ಕಾಲೇಜು ಸನಿವಾಸ ವೈದ್ಯರ ಸಂಘ ನಿರ್ಧರಿಸಿದೆ.
ಡಿ.22ರಂದು ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಲ್ಲಿಕೆಯಾಗಿದ್ದ ವರದಿಯ ಶಿಫಾರಸ್ಸಿನಂತೆ ವಜಾಗೊಂಡಿರುವ ಡಾ.ರಾಘವ್ ನಿರೂಲಾ ಅವರನ್ನು ತಕ್ಷಣ ಸೇವೆಗೆ ನಿಯೋಜಿಸಿಕೊಳ್ಳಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ. ಹಿಮಾಚಲ ಪ್ರದೇಶ ವೈದ್ಯಕೀಯ ಅಧಿಕಾರಿಗಳ ಸಂಘ ಮತ್ತು ಇತರ ಕಾಲೇಜುಗಳ ವೈದ್ಯರ ಸಂಘಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
ರಾಜ್ಯಾದ್ಯಂತ ಎಲ್ಲ ಸರ್ಕಾರಿ ವೈದ್ಯರು ಪ್ರತಿಭಟನೆಯಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಎಲ್ಲ ಸಾಮಾನ್ಯ ಸೇವೆಗಳು ಅಂದರೆ ಹೊರರೋಗಿ ವಿಭಾಗಗಳು ಮತ್ತು ಆಯ್ದ ಆಪರೇಷನ್ ಥಿಯೇಟರ್ಗಳು ಮುಚ್ಚಿರುತ್ತವೆ; ಆದರೆ ತುರ್ತು ಸೇವೆಗಳು ಕಾರ್ಯ ನಿರ್ವಹಿಸಲಿವೆ ಎಂದು ಐಜಿಎಂಸಿ ಆರ್ಡಿಎ ಶುಕ್ರವಾರ ಪ್ರಕಟಿಸಿದೆ.
"ಹೊಸದಾಗಿ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಭರವಸೆ ನೀಡಿದ್ದರೂ ವೈದ್ಯರು ಮಣಿದಿಲ್ಲ. ನರೂಲಾ ಅವರನ್ನು ವಜಾಗೊಳಿಸಿರುವುದು ಗುಂಪು ವಿಚಾರಣೆಯ ಹಿನ್ನೆಲೆಯಲ್ಲಿ ಎಂದು ವೈದ್ಯರು ಆಪಾದಿಸಿದ್ದಾರೆ. ನರೂಲಾ ಅವರು ರೋಗಿಯೊಬ್ಬರನ್ನು ಅಮಾನುಷವಾಗಿ ಥಳಿಸುತ್ತಿರುವ ಮತ್ತು ಬೆಡ್ ಮೇಲೆ ಮಲಗಿದ್ದ ರೋಗಿಯನ್ನು ಒದೆಯುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಆದರೆ ನರೂಲಾ ಅವರ ಅಭಿಪ್ರಾಯವನ್ನು ತನಿಖಾಧಿಕಾರಿಗಳು ಪರಿಗಣಿಸಿಲ್ಲ ಹಾಗೂ ಸೇವೆಯಿಂದ ವಜಾಗೊಳಿಸಿರುವುದು ನ್ಯಾಯಸಮ್ಮತವಲ್ಲ ಎನ್ನುವುದು ವೈದ್ಯರ ವಾದ.
ತುರ್ತು ಹಾಗೂ ಅತಿಗಣ್ಯರ ಕರ್ತವ್ಯ ಹೊರತುಪಡಿಸಿ ಸರ್ಕಾರಿ ವೈದ್ಯರು ಈಗಾಗಲೇ ಸಾಂದರ್ಭಿಕ ರಜೆಯಲ್ಲಿ ತೆರಳಿದ್ದು, ನಾಗರಿಕರಿಗೆ ಮುಷ್ಕರದ ಬಿಸಿ ತಟ್ಟಿದೆ. ಕುಲು, ಧರ್ಮಶಾಲಾ, ಉನಾ ಮತ್ತು ಮಂಡಿ ಪ್ರಾದೇಶಿಕ ಮತ್ತು ವಿಭಾಗೀಯ ಆಸ್ಪತ್ರೆಗಳ ಓಪಿಡಿ ಕೇಂದ್ರಗಳ ಮುಂದೆ ದೊಡ್ಡ ಸರದಿ ಸಾಲುಗಳು ಕಂಡುಬರುತ್ತಿವೆ.







